ಮೂಡಲಗಿ: ತಾಲ್ಲೂಕಿನ ಕೊನೆಯ ಗ್ರಾಮಗಳಾಗಿರುವ ಹುಣಶ್ಯಾಳ ಮತ್ತು ಢವಳೇಶ್ವರ ಗ್ರಾಮಗಳು ಘಟಪ್ರಭಾ ನದಿಯ ಪ್ರವಾಹಕ್ಕೆ ಭಾನುವಾರ ಬೆಳಿಗ್ಗೆಯಿಂದ ಅಕ್ಷರಶಃ ನಡುಗಡ್ಡೆಗಳಾಗಿವೆ.
ಹುಣಶ್ಯಾಳ ಪಿವೈ ಗ್ರಾಮದ ಹಣಮಂತ ದೇವರ ದೇವಾಲಯವು ಜಲಾವೃತಗೊಂಡಿದೆ. ಶನಿವಾರ ಸಂಜೆಯಿಂದ ನದಿಯ ನೀರಿನ ಪ್ರಮಾಣ ಏರುತ್ತಿರುವುದರಿಂದ ಇಡೀ ಊರಿನ ಜನ, ಜಾನುವಾರು, ಸಾಮಾನು ಸರಂಜುಮಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಸಾಗುತ್ತಿದ್ದಾರೆ.
ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಕಾಳಜಿ ಕೇಂದ್ರ ತೆರೆದಿದ್ದು 200ಕ್ಕೂ ಹೆಚ್ಚು ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿರ್ದೇಶನದಂತೆ ಅವರ ವಿಶೇಷ ತಂಡವು ಸಂತ್ರಸ್ತರ ವಿಶೇಷ ಕಾಳಜಿ ವಹಿಸಿದೆ.
ತಾಲ್ಲೂಕಿನಾದ್ಯಂತ ಒಟ್ಟು 13 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲಿ ನೀರು, ಊಟ ಹಾಗೂ ಹೊದಿಕೆಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ್ ಮಹಾದೇವ ಸನ್ನಮುರೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಮಸಗುಪ್ಪಿ ಗ್ರಾಮದ ಮನೆಗಳೆಲ್ಲ ಪೂರ್ಣ ಮುಳುಗಿದ್ದು ಊರಲ್ಲಿರುವ ಜನರು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸಾಗಿದ್ದಾರೆ. 2019ರಲ್ಲಿ ಬಂದ ಭೀಕರ ಪ್ರವಾಹದ ಅನುಭವ ಆಗುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.