ಬೆಳಗಾವಿ/ಚಿಕ್ಕೋಡಿ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶ, ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಕೃಷ್ಣಾ, ದೂಧಗಂಗಾ ನದಿಗಳ ಒಳಹರಿವಿನ ಪ್ರಮಾಣದಲ್ಲಿ ಮತ್ತಷ್ಟು ಏರಿಕೆಯಾಗಿದೆ. ನೆರೆಯ ಮಹಾರಾಷ್ಟ್ರ ಮತ್ತು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಇದುವರೆಗೆ 25 ಸೇತುವೆಗಳು ನೀರಿನಲ್ಲಿ ಮುಳುಗಿ ರಸ್ತೆ ಸಂಚಾರ ಕಡಿತಗೊಂಡಿದೆ.
ಕೃಷ್ಣಾ, ದೂಧಗಂಗಾ ಜಲಾನಯನ ಪ್ರದೇಶವಾದ ಕೊಯ್ನಾ, ಮಹಾಬಳೇಶ್ವರ, ಉಮದಿ, ಕಣೇರ್, ದೂಮ್, ನವಜಾ,
ಕಾಳಮ್ಮವಾಡಿ ಪ್ರದೇಶದಲ್ಲಿ ಕಳೆದ ನಾಲ್ಕೈದು ದಿನಗಳಿಂದ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣ ನೀರು ಬಂದರೆ ದೂಧಗಂಗಾ ನದಿ ಅಪಾಯ ಮಟ್ಟ ಮೀರಿ ಹರಿಯ ತೊಡಗಿದೆ. ದೂಧಗಂಗಾ ನದಿಗೆ ಈಗ ಬರುವ ನೀರಿನ ಪ್ರಮಾಣ ಎರಡು ಅಡಿಯಷ್ಟು ಹೆಚ್ಚಾದರೆ ಅಪಾಯಮಟ್ಟ ತಲುಪಲಿದೆ.
ದೂಧಗಂಗಾ ನದಿ ಪ್ರವಾಹದಿಂದ ಕಾರದಗಾ-ಬೋಜ, ಮಲಿಕವಾಡ-ದತ್ತವಾಡ, ವೇದಗಂಗಾ ನದಿಯಿಂದ ಭೋಜವಾಡಿ-ನಿಪ್ಪಾಣಿ, ಸಿದ್ನಾಳ-ಅಕ್ಕೋಳ, ಭಾರವಾಡ-ಕುನ್ನೂರ, ಭೋಜ-ಕುನ್ನೂರ, ಜತ್ರಾಟ-ಭೀವಸಿ, ಕೃಷ್ಣಾ ನದಿಯಿಂದ ಬಾವನಸವದತ್ತಿ-ಮಾಂಜರಿ, ಹಾಲಹಳ್ಳ, ಚಿಂಚಲಿ-ಬಿರಡಿ, ಕುಡಚಿ, ಉಗಾರ ಖುರ್ದ-ಕುಡಚಿ ಸೇತುವೆಗಳು, ಮಿರಜ್- ಜಮಖಂಡಿ ರಸ್ತೆ ನೀರಿನಲ್ಲಿ ಮುಳುಗಿ ಸಂಪರ್ಕ ಕಡಿತಗೊಂಡಿದೆ.ಘಟಪ್ರಭಾ ನದಿ ಪ್ರವಾಹದಿಂದ ಚಿಗಡೊಳ್ಳಿ- ನಲ್ಲಾನಟ್ಟಿ, ಗೋಕಾಕ ಹಿಲ್-
ಶಿಂಗಳಾಪುರ, ಗೋಕಾಕ-ಲೊಳಸೂರ, ಮುನ್ಯಾಳ -ಪಿವಿ ಹುಣಶ್ಯಾಳ, ಪಟಗುಂಡಿ-ತಿಗಡಿ, ಸುಣ ಧೋಳಿ-ಮೂಡಲಗಿ, ಅವರಾದಿ-ಮಹಾಲಿಂಗ ಪುರ, ಉದಗಟ್ಟಿ- ವಢೇರಹಟ್ಟಿ, ಶೆಟ್ಟಿಹಳ್ಳಿ- ಮಾರವಳ್ಳಿ, ಹಿರಣ್ಯಕೇಶಿ ನದಿಯಿಂದ ಅರ್ಜುನ ವಾಡ-ಕೋಚರಿ, ಸಂಕೇಶ್ವರ-ನದಿಗಳಲ್ಲಿ, ಕುರಣಿ- ಕೋಚರಿ, ಯರನಾಳ-ಹುಕ್ಕೇರಿ, ಮಲಪ್ರಭಾ ನದಿ ಪ್ರವಾಹದಿಂದ ಚಿಕ್ಕಹಟ್ಟಿಹೋಳಿ-ಚಿಕ್ಕಮುನ್ನೋಳಿ ನಡುವಿನ ಸೇತುವೆಗಳು ನೀರಿನಲ್ಲಿ ಮುಳುಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.