ಬೈಲಹೊಂಗಲ: ನೂತನವಾಗಿ ಘೋಷಣೆ ಮಾಡಿರುವ ನದಾಫ-ಪಿಂಜಾರ ಹಾಗೂ ಇತರೆ 13 ಜಾತಿಗಳ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಂತೆ ಒತ್ತಾಯಿಸಿ ನದಾಫ, ಪಿಂಜಾರ ಸಮಾಜ ತಾಲ್ಲೂಕು ಘಟಕದ ಸದಸ್ಯರು ಶಿರಸ್ಥೇದಾರ ರಾಘವೇಂದ್ರ ಪೂಜಾರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ನದಾಫ-ಪಿಂಜಾರ ತಾಲ್ಲೂಕು ಘಟಕದ ಅಧ್ಯಕ್ಷ ಅಬ್ದುಲಕಲಾಮ ಆಜಾದ ನದಾಫ ಮಾತನಾಡಿ, ರಾಜ್ಯದಲ್ಲಿ 22ಲಕ್ಷಕ್ಕೂ ಅಧಿಕ ಸಂಖ್ಯೆ ಹೊಂದಿರುವ ಪಿಂಜಾರ,ನದಾಫ ಜನಾಂಗವು ಸಾಮಾಜಿಕ,ಔದ್ಯೋಗಿಕ, ಶೈಕ್ಷಣಿಕ,ರಾಜಕೀಯ ಕ್ಷೇತ್ರ ಸೇರಿದಂತೆ ಅತ್ಯಂತ ಶೋಷಣೆ ಯಿಂದ ನಲುಗುತ್ತಿದೆ.
ಪ್ರವರ್ಗ-1 ಮೀಸಲಾತಿಯಡಿ ಅಲ್ಪಸಂಖ್ಯಾತ ಹಿಂದುಳಿದ ವರ್ಗದ ಯೋಜನೆಯಡಿ ಸೌಲಭ್ಯಗಳನ್ನು ನೀಡಲು ಸರ್ಕಾರದ ಆದೇಶವಿದ್ದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ.
ನದಾಪ್ ಪಿಂಜಾರ ಸಮಾಜವು ಅಲ್ಪಸಂಖ್ಯಾತ ಪಂಗಡ ದಲ್ಲಿನ ಪ್ರವರ್ಗ 1 ಮೀಸಲಾತಿ ಹೊಂದಿದ್ದು ಸರ್ಕಾರ ನಮ್ಮ ಸಮಾಜದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಹೊಂದಲು ನಿಗಮಕ್ಕೆ ಅನುಧಾನ ನೀಡಬೇಕು. ನಮ್ಮ ಬೇಡಿಕೆಗೆ ಸ್ಪಂದಿಸದೇ ಇದ್ದಲ್ಲಿ ಬಹಿರಂಗವಾಗಿ ಪ್ರತಿಭಟನೆ, ಧರಣಿ ನಡೆಸಲಾಗುವದು ಎಂದು ಮನವಿ ಪತ್ರದಲ್ಲಿ ಎಚ್ಚರಿಸಿದರು.
ಫಕೃಸಾಬ ಹಳೇಮನಿ, ಸತ್ತಾರ ಅಹಮದ ನದಾಫ, ಬುಡ್ಡೆಸಾಬ ಮದಲಮಟ್ಟಿ, ಇರ್ಷಾದ ಪಾಟೀಲ, ಮಲ್ಲಿಕ ಕುಸಲಾಪುರ, ಸಾಜಿದ ಬಾಬಣ್ಣವರ, ಶೌಕತ ಬುಡ್ರಕಟ್ಟಿ, ಮಕ್ತುಮ ನದಾಫ, ನಬಿಸಾಬ ನದಾಫ, ಎನ್.ಎ. ನದಾಫ, ಫಕೃಸಾಬ ಕುಸಲಾಪುರ, ಅನ್ವರ ಮದಲಮಟ್ಟಿ, ರಫೀಕ ನದಾಫ, ಮೈನು ನದಾಫ ಇದ್ದರು.