ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಶುರು ವಾಯಿತೆಂದರೆ ಗಡಿ ಭಾಗ ಬೆಳಗಾವಿ ಜಿಲ್ಲೆಯಿಂದ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಹಾಗೂ ಮಣ್ಣು ಕುಸಿತ ಆಗುವುದು ಸಾಮಾನ್ಯವಾಗಿದ್ದು, ಕುಸಿತಕ್ಕೆ ತಡೆ ಇಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಪಶ್ಚಿಮ ಘಟ್ಟದಲ್ಲಿ ಸುರಿಯುವ ಧಾರಾಕಾರ ಮಳೆಯಿಂದ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಅಪಾಯಕಾರಿ ಮಟ್ಟಕ್ಕೆ ತಲುಪುತ್ತವೆ. ಗುಡ್ಡ ಕುಸಿತ ಆಗುವುದು ಈ ಪ್ರದೇಶದಲ್ಲಿ ಸಾಮಾನ್ಯವಾಗಿದೆ. ಬಹುತೇಕ ರಸ್ತೆಗಳು ಕಿರಿದಾಗಿರು ವುದರಿಂದ ಈ ಮಾರ್ಗದಲ್ಲಿ ಗುಡ್ಡ ಕುಸಿತಗೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ. ಗುಡ್ಡ ಕುಸಿತ ತಡೆಯಲು ಲೋಕೋಪ ಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಏಕೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ.
ಬೆಳಗಾವಿಯಿಂದ ಗೋವಾಕ್ಕೆ ಹೋಗುವ ಅನಮೋಡ ಘಾಟ್, ಚೋರ್ಲಾ ಘಾಟ್, ತಿಲಾರಿ ಘಾಟ್, ಮಹಾರಾಷ್ಟ್ರಕ್ಕೆ ಹೋಗುವ ಅಂಬೋಲಿ ಘಾಟ್‌ನಲ್ಲಿ ಪದೇ ಪದೇ ಗುಡ್ಡ ಕುಸಿತವಾಗುತ್ತದೆ. ಕೊಂಕಣ ರೈಲ್ವೆ ಸಂಪರ್ಕ ಕಲ್ಪಿಸುವ ಗೋವಾಕ್ಕೆ ತೆರಳುವ ರೈಲ್ವೆ ಮಾರ್ಗದಲ್ಲಿಯೂ ಮಣ್ಣು ಕುಸಿತಗೊಂಡು ರೈಲು ಸಂಚಾರಕ್ಕೆ ತಡೆಯೊಡ್ಡುತ್ತದೆ. ಅಂಬೋಲಿ ಘಾಟ್ ಮಾರ್ಗದಲ್ಲಿ ಎರಡು ತಿಂಗಳಲ್ಲಿ ಮೂರ್‍ನಾಲ್ಕು ಬಾರಿ ಮಣ್ಣು ಕುಸಿತವಾಗಿದೆ. ಬುಧವಾರವಷ್ಟೇ ದೊಡ್ಡದಾದ ಕಲ್ಲು ಬಂಡೆ ರಸ್ತೆ ಮೇಲೆ ಬಿದ್ದು, ಆತಂಕಕ್ಕೆ ಎಡೆ ಮಾಡಿ ಕೊಟ್ಟಿದೆ.ಮಳೆಗಾಲದಲ್ಲಿ ಈ ಮಾರ್ಗಗಳು ದೊಡ್ಡ ಪ್ರಮಾಣದಲ್ಲಿ ಅಪಾಯಕ್ಕೆ ಎಡೆ ಮಾಡಿಕೊಡುತ್ತವೆ.