ಬೆಳಗಾವಿ: ಪತಿ ಹಾಗೂ ಅವರ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ ವಿರುದ್ಧವೇ ಪ್ರತಿ ದೂರು ದಾಖಲಾಗಿದೆ.
ಇಲ್ಲಿನ ಗಣೇಶಪುರದ ನಿವಾಸಿ ಕನ್ವಿಕಾ ಗಣೇಶ ಗುಡ್ಯಾಗೋಳ (22) ಮಂಗಳವಾರ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು.
ನಂತರ ಪತಿ ಹಾಗೂ ಅವರ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. ಪತಿ ಗಣೇಶ ಅವರ ತಂದೆ ಹಾಗೂ ಸೋದರಮಾವ ಇಲ್ಲಿನ ಕ್ಯಾಂಪ್ ಠಾಣೆಗೆ ಪ್ರತಿ ದೂರು ನೀಡಿದ್ದಾರೆ.
‘ಕನ್ವಿಕಾ ಮನೆಯಲ್ಲಿ ಸರಿಯಾಗಿ ನಡೆದುಕೊಂಡಿಲ್ಲ. ಅವರಿಗೆ ಮಾದಕ ದ್ರವ್ಯಗಳ ಚಟವಿದೆ. ಗಣೇಶ ಹಾಗೂ ಕನ್ವಿಕಾ ಸಹಪಾಠಿಗಳಾಗಿದ್ದರು. ಕನ್ವಿಕಾ ಬಗ್ಗೆ ಗೊತ್ತಾದ ಮೇಲೆ ಗಣೇಶ ಮದುವೆಗೆ ನಿರಾಕರಿಸಿದ್ದ. ಆದರೆ, ಬಿಜೆಪಿ ಮುಖಂಡ ಪೃಥ್ವಿಸಿಂಗ್ ಎಂಬುವವರು ಬೆದರಿಕೆ ಹಾಕಿ ಮದುವೆ ಮಾಡಿಸಿದ್ದರು. ಮದುವೆ ಬಳಿಕವೂ ಕನ್ವಿಕಾ ತಮ್ಮ ಚಟ ಬಿಡಲಿಲ್ಲ. ಬೇರೊಬ್ಬ ವ್ಯಕ್ತಿ ಜತೆಗೆ ಸ್ನೇಹ ಬೆಳೆಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.