ನವದೆಹಲಿ: ಅನಾರೋಗ್ಯದಿಂದ ರಾಷ್ಟ್ರ ರಾಜಧಾನಿಯ ಏಮ್ಸ್ ಗೆ ದಾಖಲಾಗಿದ್ದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಡಿಸ್ಚಾರ್ಜ್ ಆಗಿದ್ದಾರೆ. ಬೆನ್ನುನೋವಿನಿಂದ ಕಳೆದೆರಡು ದಿನಗಳ ಹಿಂದೆ ದಾಖಲಾಗಿದ್ದ ರಾಜನಾಥ್ ಸಿಂಗ್ ಅವರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಏಮ್ಸ್ ನ ಮಾಧ್ಯಮ ಕೋಶದ ಉಸ್ತುವಾರಿ ಡಾ.ರೀಮಾ ದಾದಾ, ಬೆನ್ನುನೋವಿಗಾಗಿ ರಕ್ಷಣಾ ಸಚಿವರಿಗೆ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಅವರ ಆರೋಗ್ಯ ಪರಿಸ್ಥಿತಿ ಉತ್ತಮವಾಗಿದೆ ಎಂದು ಹೇಳಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಗುರುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಆರೋಗ್ಯ ಹದಗೆಟ್ಟ ನಂತರ ಏಮ್ಸ್‌ನ ನ್ಯೂರೋ ಸರ್ಜರಿ ವಿಭಾಗಕ್ಕೆ ದಾಖಲಿಸಲಾಗಿತ್ತು. ಇಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಡಾ. ರೀಮಾ ದಾದಾ ತಿಳಿಸಿದರು.