ಹುಕ್ಕೇರಿ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ಯಾರಂಟಿ ಯೋಜನೆ ಹೆಸರಿನಲ್ಲಿ ರೈತರು ಸೇರಿದಂತೆ ಜನರನ್ನು ಪರಾವಲಂಬಿಗಳಾಗಿ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಹೇಳಿದರು.
ತಾಲ್ಲೂಕಿನ ನೇರಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ 2024-25 ರಿಂದ 2026-27ನೇ ಸಾಲಿಗೆ ಮಂಜೂರಾದ ₹5.59 ಕೋಟಿ ಪತ್ತನ್ನು ಬುಧವಾರ 811 ಸದಸ್ಯರಿಗೆ ವಿತರಿಸಿ ಮಾತನಾಡಿದರು.
‘ಪಕ್ಷಾತೀತವಾಗಿ ಸರ್ಕಾರಗಳು ಬರಬರುತ್ತ ಜನರನ್ನು ಸ್ವಾವಲಂಬಿ ಬದುಕು ಕಲಿಯಲು ಬೇಕಾದ ನೀತಿ ರಚಿಸದೇ, ಪರಾವಲಂಬಿ ಬದುಕಿಗೆ ಬೇಕಾದ ನೀತಿ ರೂಪಿಸುತ್ತಿರುವುದು ದೇಶದ ಭವಿಷ್ಯಕ್ಕೆ ಮಾರಕ’ ಎಂದು ವಿಷಾದ ವ್ಯಕ್ತಪಡಿಸಿದರು.
‘ರೈತರೂ ಕೂಡಾ ಇದರ ಬಗ್ಗೆ ಚಿಂತಿಸದೆ, ರಾಸಾಯನಿಕ ಗೊಬ್ಬರ ಬಳಸಿ, ಭೂಮಿಯನ್ನು ಬರಡು ಮಾಡುತ್ತ, ಫಲವತ್ತತೆ ಕಡಿಮೆ ಮಾಡುತ್ತಿರುವುದು ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತೆ’ ಎಂದು ಕುಟುಕಿದರು.