ಗದಗ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಮುಂಗಾರು ಮಳೆ ಕಣ್ಣಾಮುಚ್ಚಾಲೆ ಆಡುತ್ತಿದ್ದರೂ ಕೃಷಿ ಚಟುವಟಿಕೆಗಳಿಗೆ ಬೇಕಿರುವಷ್ಟು ಮಳೆ ಆಗಿದೆ. ಈಗ ಬಿತ್ತನೆ ಆಗಿರುವ ಬೆಳೆಗಳಿಗೆ ಮಳೆ ಕೊರತೆ ಇಲ್ಲವಾದರೂ ಒಂದು ಹದ ಮಳೆಯಂತೂ ಆಗಬೇಕಿದೆ.
ಗದಗ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3.02 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಈವರೆಗೆ 2.88 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಶೇ 95ರಷ್ಟು ಗುರಿ ಸಾಧನೆಯಾಗಿದೆ. ಈ ಪೈಕಿ ಹೆಸರು ಬೆಳೆ ಅತಿ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಸೂರ್ಯಕಾಂತಿ ಬೆಳೆ ಜುಲೈ ಕೊನೆವರೆಗೂ ಬಿತ್ತನೆ ಆಗಲಿದೆ.
‘ಗದಗ ಜಿಲ್ಲೆಯಲ್ಲಿ ಈವರೆಗೆ ವಾಡಿಕೆಗಿಂದ ಶೇ 8ರಷ್ಟು ಹೆಚ್ಚು ಮಳೆಯಾಗಿದೆ. ಬೀಜ, ಗೊಬ್ಬರಕ್ಕೆ ಕೊರತೆ ಇಲ್ಲ. ಸಾಕಷ್ಟು ದಾಸ್ತಾನು ಇದೆ. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 32 ಸಾವಿರ ರೈತರು ಬೆಳೆವಿಮೆ ಮಾಡಿಸಿದ್ದಾರೆ. ನೋಂದಣಿ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದ್ದು, ಬಿತ್ತನೆ ಮಾಡಿರುವ ರೈತರೆಲ್ಲರೂ ಬೆಳೆ ವಿಮೆ ಮಾಡಿಸಬೇಕು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಿ.ಎಚ್.ತಾರಾಮಣಿ ಮನವಿ ಮಾಡಿದ್ದಾರೆ.
‘ಗದಗ ಜಿಲ್ಲೆಯಲ್ಲಿ ದಾಸ್ತಾನು ಇದ್ದ 6,440 ಕ್ವಿಂಟಲ್ ಪೈಕಿ 5,035 ಕ್ವಿಂಟಲ್ ಬೀಜ ವಿತರಣೆ ಮಾಡಲಾಗಿದೆ. 34,969 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿದ್ದು, 21,800 ಮೆಟ್ರಿಕ್ ಟನ್ ದಾಸ್ತಾನು ಇದೆ’ ಎಂದು ಅವರು ತಿಳಿಸಿದ್ದಾರೆ.