ಹೊಸದಿಲ್ಲಿ: ಖ್ಯಾತ ಶಟ್ಲರ್ ಪಿ.ವಿ. ಸಿಂಧು ಮತ್ತು ಅನುಭವಿ ಟೇಬಲ್ ಟೆನಿಸ್ ಆಟಗಾರ ಅಚಂತ ಶರತ್ ಕಮಲ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಧ್ವಜಧಾರಿಗಳಾಗಿರುತ್ತಾರೆ. ಉದ್ಘಾಟನ ಸಮಾರಂಭದ ವೇಳೆ ಇವರು ತ್ರಿವರ್ಣ ಧ್ವಜ ಹಿಡಿದು ಸಾಗಲಿದ್ದಾರೆ.
ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಮಾಜಿ ಶೂಟರ್ ಗಗನ್ ನಾರಂಗ್ ಅವರು ಭಾರತ ತಂಡದ ಚೆಫ್ ಡಿ ಮಿಷನ್ ಆಗಿರುತ್ತಾರೆ.
ಮೇರಿ ಕೋಮ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನವನ್ನು “ಡೆಪ್ಯುಟಿ’ ಆಗಿದ್ದ ನಾರಂಗ್ ತುಂಬಲಿದ್ದಾರೆ. ಭಾರತೀಯ ಒಲಿಂಪಿಕ್ಸ್ ಒಕ್ಕೂಟದ (ಐಒಎ)ಅಧ್ಯಕ್ಷೆ ಪಿ.ಟಿ. ಉಷಾ ಅವರು ಇದನ್ನು ಪ್ರಕಟಿಸಿದರು.