ಬೆಂಗಳೂರು: “ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕು ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಪಕ್ಷ ತೀರ್ಮಾನ ಮಾಡಿ, ಇನ್ನೂ ಐದು ಜನರನ್ನು ಮಾಡಿದರೆ ಒಳ್ಳೆಯದು’ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ವ್ಯಂಗ್ಯವಾಡಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಪ್ರತಿಕ್ರಿಯೆ ನೀಡಿ, ಐದು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಪ್ರಸ್ತಾವ ಮಾಡಿದ್ದಾರೆ.
ಹೆಚ್ಚುವರಿ ಡಿಸಿಎಂ ಮಾಡಿದರೆ ಡಿ.ಕೆ. ಶಿವಕುಮಾರ್ ಅವರ ಬಲ ಕುಗ್ಗಿದಂತೆ ಆಗುವುದಿಲ್ಲವೇ ಎಂದು ಕೇಳಿದ್ದಕ್ಕೆ, “ಡಿ.ಕೆ. ಶಿವಕುಮಾರ್ ಪ್ರಶ್ನೆ ಇಲ್ಲಿ ಬರುವುದಿಲ್ಲ’ ಎಂದರು.
“ಎಂಟು ಬಾರಿ ಶಾಸಕರಾಗಿರುವ ರಾಮಲಿಂಗಾರೆಡ್ಡಿ, ಎಂಟು ವರ್ಷಗಳ ಕಾಲ ಪಕ್ಷದ ಅಧ್ಯಕ್ಷರಾಗಿದ್ದ ಡಾ| ಪರಮೇಶ್ವರ, ಪಕ್ಷದ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿರುವ ಸತೀಶ್ ಜಾರಕಿ ಹೊಳಿ, ಈಶ್ವರ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಎಂ.ಬಿ. ಪಾಟೀಲ್, ಒಕ್ಕಲಿಗ ಸಮುದಾಯದ ಕೃಷ್ಣ ಬೈರೇ ಗೌಡ, ಮಂಡ್ಯದಿಂದ ಸಚಿವ ಎನ್. ಚಲುವರಾಯಸ್ವಾಮಿ, ಬ್ರಾಹ್ಮಣ ಸಮು ದಾಯದಿಂದ ದಿನೇಶ್ ಗುಂಡೂರಾವ್, ಹಿರಿಯರಾದ ಆರ್.ವಿ. ದೇಶಪಾಂಡೆ, ಕೆ.ಎಚ್. ಮುನಿಯಪ್ಪ ಇದ್ದಾರೆ. ಇವರೆಲ್ಲ ರನ್ನೂ ಡಿಸಿಎಂ ಮಾಡಬಹುದು’ ಎಂದು ಸುರೇಶ್ ಮಾರ್ಮಿಕವಾಗಿ ಹೇಳಿದರು.
8- 10 ಡಿಸಿಎಂ ಹುದ್ದೆ ಕೊಡಬೇಕು ಎಂಬುದು ನಿಮ್ಮ ಅಭಿಪ್ರಾಯವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, “ಸಾಮಾಜಿಕ ನ್ಯಾಯ ನೀಡಬೇಕಲ್ಲವೇ?’ ಎಂದು ವ್ಯಂಗ್ಯವಾಗಿ ಹೇಳಿದರು.
ಹಾಗೆ ಮಾಡುವುದರಿಂದ ಪಕ್ಷದ ಬಲವರ್ಧನೆ ಆಗುತ್ತದೆಯೇ ಎಂದು ಗೊತ್ತಿಲ್ಲ. ಎಲ್ಲ ಸಮುದಾಯದವರಿಗೂ ಅರ್ಹತೆ ಇದೆ. ಅದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡಲಿದ್ದಾರೆ ಎಂದರು.
ಹೈಕಮಾಂಡ್‌ನಿಂದ ಶೀಘ್ರವೇ ತರಾಟೆ ?
“ಇದೊಂದು ಅನಗತ್ಯ ಗೊಂದಲ ಸೃಷ್ಟಿ ಅಷ್ಟೇ. ಇದೇ ಸಿದ್ದರಾಮಯ್ಯ ಅವರ ಹಿಂದಿನ ಅವಧಿಯಲ್ಲಿ ಡಿಸಿಎಂ ಹುದ್ದೆಯೇ ಇರಲಿಲ್ಲ. ಈಗ ಷರತ್ತಿನೊಂದಿಗೆ ಒಂದು ಹುದ್ದೆ ಸೃಷ್ಟಿ ಮಾಡಲಾಗಿದೆ. ಸಂಸತ್ತಿನ ಅಧಿವೇಶನ ಮುಗಿಯುತ್ತಿದ್ದಂತೆ ಹೈಕಮಾಂಡ್ ತರಾಟೆಗೆ ತೆಗೆದು ಕೊಳ್ಳಲಿದ್ದು, ಆಗ ಇದೆಲ್ಲದಕ್ಕೂ ತೆರೆ
ಬೀಳಲಿದೆ’ ಎಂದು ಪಕ್ಷದ ಮೂಲ ಗಳು ಸ್ಪಷ್ಟಪಡಿಸಿವೆ.
ಕಾಂಗ್ರೆಸ್ ಸಚಿವರು ಮೂರು ಮಂದಿ ಡಿಸಿಎಂ ಬೇಕು ಎಂದು ಕೇಳುತ್ತಿರುವ ವಿಷಯದ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಯಾರು ಚರ್ಚೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ.
-ಡಿ.ಕೆ. ಶಿವಕುಮಾರ್, ಡಿಸಿಎಂ