ಬೆಂಗಳೂರು: ನಗರದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಸರ್ಕಾರಿ ಭೂಮಿ ಒತ್ತುವರಿದಾರರ ವಿರುದ್ಧ ಸಮರ ಸಾರಿದ್ದಾರೆ. ಇಂದು ಅಕ್ರಮ ಸರ್ಕಾರಿ ಭೂ ಒತ್ತುವರಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಿ, ಬಿಸಿ ಮುಟ್ಟಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಕಂದಾಯ ಇಲಾಖೆಯ ಸಚಿವನಾಗಿ ನಾನು ಜವಾಬ್ದಾರಿ ವಹಿಸುತ್ತಿದ್ದಂತೆ ನಿರ್ಧರಿಸಿದ ಮೊದಲ ಕೆಲಸ ಸರ್ಕಾರಿ ಜಮೀನಿನ ಒತ್ತುವರಿ ತೆರವು.
ಕಳೆದ ವರ್ಷ 2023ರ ಜೂನ್ ತಿಂಗಳ ಮೊದಲ ವಾರವೇ ಇಲಾಖೆಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಒತ್ತುವರಿಯಾಗಿರುವ ಎಲ್ಲಾ ಸರ್ಕಾರಿ ಜಮೀನಿನ ವಿವರವನ್ನು ಕೇಳಲಾಗಿತ್ತು. ಅಲ್ಲದೆ, ಯಾವುದೇ ಭೂ ಮಾಫಿಯಾ ಮರ್ಜಿಗೆ ಒಳಗಾಗದೆ ಅಥವಾ ಬೆದರಿಕೆಗಳಿಗೆ ಬಗ್ಗದೆ ವಾರಾಂತ್ಯಗಳಲ್ಲಿ ಒತ್ತುವರಿ ಕಾರ್ಯಾಚರಣೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಲಾಗಿತ್ತು ಎಂದಿದ್ದಾರೆ.
ಪರಿಣಾಮ ಕಳೆದ ವರ್ಷ ಜೂನ್ ತಿಂಗಳಿನಿಂದಲೇ ಬೆಂಗಳೂರು ನಗರ-ಗ್ರಾಮೀಣ ಭಾಗದಲ್ಲಿ ಒತ್ತುವರಿ ತೆರವು ಕೆಲಸ ಆರಂಭಿಸಲಾಗಿತ್ತು. ಅದರಂತೆ ನೂರಾರು ಕೋಟಿ ಮೌಲ್ಯದ ಯಲಹಂಕ ತಾಲ್ಲೂಕು, ಜಾಲ ಹೋಬಳಿ ಕಟ್ಟಿಗೇನಹಳ್ಳಿ ಗ್ರಾಮದ ಸ.ನಂ.28 ರಲ್ಲಿ 13.07 ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿರುವುದು ಗಮನಕ್ಕೆ ಬಂದಿತ್ತು. ಈ ಪೈಕಿ ಎರಡು ಎಕರೆ ಜಮೀನನ್ನು ಕೆಲವು ಭ್ರಷ್ಟ ಅಧಿಕಾರಿಗಳು ಈಗಾಗಲೇ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟಿರುವುದು ಗಮನಕ್ಕೆ ಬಂದಿತ್ತು ಎಂದು ತಿಳಿಸಿದ್ದಾರೆ.