ಕಲಬುರಗಿ: ರಾಜ್ಯ ಸರಕಾರ ಪೆಟ್ರೋಲ್, ಡಿಸೆಲ್ ದರ ಏರಿಕೆ ಮಾಡಿರುವುದನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿಗಳ ಸಲಹೆಗಾರರು ಹಾಗೂ ಆಳಂದ ಶಾಸಕ ಬಿ.ಆರ್. ಪಾಟೀಲ್, ಕಲ್ಯಾಣ ಕರ್ನಾಟಕವು ಸೇರಿದಂತೆ ರಾಜ್ಯದಲ್ಲಿ ಜಾರಿಗೆ ತರಲಾಗುತ್ತಿರುವ ಅಕ್ಷರ ಆವಿಷ್ಕಾರ ಯೋಜನೆಯ ಕುರಿತು ಅಪಸ್ವರ ಎತ್ತಿದ್ದಾರೆ.
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆ ಕಲ್ಯಾಣ ಕರ್ನಾಟಕದ 800ಕ್ಕೂ ಹೆಚ್ಚು ಶಾಲೆಗಳಲ್ಲಿ ಜಾರಿಗೆ ತರುತ್ತಿರುವುದು ನಮಗೆ ಗೊತ್ತಿಲ್ಲ. ಅದೂ ಅಲ್ಲದೆ ಬಹುತೇಕ ಶಾಸಕರಿಗೂ ಈ ವಿಷಯ ತಿಳಿದಿಲ್ಲ ಎಂದು ಅವರು, ಶಿಕ್ಷಣ ಇಲಾಖೆ ಮತ್ತು ಕೆಕೆಆರ್‌ಡಿಬಿ ಸಂಯುಕ್ತವಾಗಿ “ಅಕ್ಷರ ಆವಿಷ್ಕಾರ”ವನ್ನು ಜಾರಿಗೆ ತರುತ್ತಿರುವುದರ ಹಿಂದಿನ ಹಕೀಕತ್ತು ಅರ್ಥವಾಗಿಲ್ಲ ಎಂದರು.
ಕಲ್ಯಾಣ ಕರ್ನಾಟಕದಲ್ಲಿ ಇರುವ ಸರಕಾರಿ ಶಾಲೆಗಳನ್ನೇ ಬಲಪಡಿಸಲು ಆಗದೆ, ಗುಣಮಟ್ಟದ ಶಿಕ್ಷಣವನ್ನು ಕೊಡಲಿಕ್ಕಾಗದೆ ಒದ್ದಾಡುತ್ತಿರುವ ಈ ಸಂದರ್ಭದಲ್ಲಿ, ಹೊಸದಾಗಿ ಎಲ್ ಕೆಜಿ, ಯುಕೆಜಿ ಯನ್ನು ಪ್ರಾರ್ಥಮಿಕ ಶಾಲೆಯಲ್ಲಿ ಕಲಿಸುವ ಜರೂರತ್ತು ಇತ್ತೇ ಎಂದು ಪ್ರಶ್ನಿಸಿದ್ದಾರೆ.
ಅದು ಅಲ್ಲದೆ ಪ್ರಾಥಮಿಕ ಶಾಲೆಗಳಲ್ಲಿ ಎಲ್ ಕೆಜಿ, ಯುಕೆಜಿ ಆರಂಭ ಮಾಡುವುದರಿಂದ ಅಂಗನವಾಡಿಗಳು ಸಂಪೂರ್ಣವಾಗಿ ಕಣ್ಣುಮುಚ್ಚುತ್ತವೆ. ಅಲ್ಲದೇ ಅಂಗನವಾಡಿಗಳಲ್ಲಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರು, ಟೀಚರ್ ಗಳು ಹಾಗೂ ಅಡುಗೆ ಸಹಾಯಕರು ಬೀದಿಗೆ ಬೀಳಲಿದ್ದಾರೆ. ಆದ್ದರಿಂದ ಕೂಡಲೇ ಸರ್ಕಾರ ಇಂತಹ ನಿರ್ಧಾರವನ್ನು ಮರು ಪರಿಶೀಲನೆ ಮಾಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.