ಚೆನ್ನೈ: ಖ್ಯಾತ ನಟರೊಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿರುವುದು ವರದಿಯಾಗಿದೆ.
ಕಾಲಿವುಡ್ ನಟ ಪ್ರದೀಪ್ ವಿಜಯನ್ ಬುಧವಾರ (ಜೂನ್ 12 ರಂದು) ಚೆನ್ನೈನ ಪಲವಕ್ಕಂನ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ನಟನ ಸ್ನೇಹಿತ ಕಳೆದ ಎರಡು ದಿನಗಳಿಂದ ಪ್ರದೀಪ್ ವಿಜಯನ್ ಅವರಿಗೆ ಫೋನ್ ಮೂಲಕ ಸಂಪರ್ಕಿಸಲು ಯತ್ನಿಸಿದ್ದಾರೆ.
ಆದರೆ ಕರೆಯನ್ನು ರಿಸೀವ್ ಮಾಡದ ಕಾರಣ ಒಬ್ಬ ಸ್ನೇಹಿತ ಮನೆಗೆ ಹೋಗಿ ನೋಡಿದಾಗ ಪ್ರದೀಪ್ ಶವವಾಗಿ ಪತ್ತೆಯಾಗಿದ್ದಾರೆ. ಆ ಬಳಿಕ ಸ್ನೇಹಿತರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರದೀಪ್ ಇತ್ತೀಚೆಗೆ ಉಸಿರಾಟದ ತೊಂದರೆ ಮತ್ತು ತಲೆತಿರುಗುವ ಬಗ್ಗೆ ಸ್ನೇಹಿತ ಜೊತೆ ಹೇಳಿಕೊಂಡಿದ್ದರು.
ಪೊಲೀಸರು ಬಂದು ಮನೆಯ ಬಾಗಿಲು ಒಡೆದು, ಒಳ ನುಗ್ಗಿದಾಗ ತಲೆಗೆ ಏಟಾದ ಸ್ಥಿತಿಯಲ್ಲಿನ ಪ್ರದೀಪ್ ಬಿದ್ದಿರುವುದು ಕಂಡುಬಂದಿದೆ. ಮೃತದೇಹವನ್ನು ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಎರಡು ದಿನಗಳ ಹಿಂದೆ ತಲೆಗೆ ಪೆಟ್ಟಾಗಿ ಬಿದ್ದು, ಹೃದಯಾಘಾತದಿಂದ ಪ್ರದೀಪ್ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ನೀಲಂಕಾರೈ ಪೊಲೀಸರು ಸಾವಿನ ಕಾರಣವನ್ನು ತನಿಖೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷಾ ವರದಿ ಬಳಿಕವಷ್ಟೇ ಸತ್ಯಾಂಶ ಹೊರಬೀಳಲಿದೆ.