ವಿಜಯಪುರ: ಕಳೆದ ವರ್ಷದ ಭೀಕರ ಬರದಿಂದ ಕಂಗಾಲಾಗಿದ್ದ ವಿಜಯಪುರ ಜಿಲ್ಲೆಯ ರೈತರಿಗೆ ಈ ಬಾರಿಯ ಮುಂಗಾರು ಭಾರಿ ಆಶಾಭಾವ ಮೂಡಿಸಿದ್ದು, ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ. ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಅನ್ನದಾತರಿಂದ ಬಿತ್ತನೆ ಕಾರ್ಯವೂ ಭರದಿಂದ ಸಾಗಿದೆ.
ಜೂನ್ 1 ರಿಂದ 11 ವರೆಗೆ 35 ಮಿ.ಮೀ. ಸಾಮಾನ್ಯ ಮಳೆ ಆಗಬೇಕಿದ್ದರೂ 180 ಮಿ.ಮೀ. ಮಳೆ ಸುರಿದಿದ್ದು, ಭೂಮಿ ಉತ್ತಮ ಹದಗೊಂಡಿದ್ದು, ಬಿತ್ತನೆ ಕಾರ್ಯ ಚುರುಕು ಪಡೆದಿದೆ. ಹವಾಮಾನ ಇಲಾಖೆಯ ಪ್ರಕಾರ ಆಗಸ್ಟ್-ಸೆಪ್ಟೆಂಬರ್ ವರೆಗೂ ಉತ್ತಮ ಮಳೆ ಇದೆ. ಇದರಿಂದಾಗಿ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಕೈ ಹಿಡಿಯುವ ನಿರೀಕ್ಷೆಯಲ್ಲಿ ಅನ್ನದಾತರು ಭೂದೇವಿ ಮಡಿಲಿಗೆ ಬೀಜ ಉಡಿ ತುಂಬುವ ಧಾವಂತದಲ್ಲಿ ತೊಡಗಿದ್ದಾರೆ.
20 ರೈತ ಸಂಪರ್ಕ ಕೇಂದ್ರ
ವಿಜಯಪುರ ಜಿಲ್ಲೆಯಲ್ಲಿ 20 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಿದ್ದು, ವಿತರಣೆಯೂ ಭರದಿಂದಲೇ ನಡೆದಿದೆ. ಇದಲ್ಲದೇ ರೈತರ ಅನುಕೂಲಕ್ಕಾಗಿ ಜಿಲ್ಲೆಯ ವಿವಿಧ ಕಡೆಗಳಲ್ಲಿ 17 ಉಪ ಕೇಂದ್ರಗಳನ್ನೂ ತೆರೆದು ಬೀಜ-ಗೊಬ್ಬರ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.