ಹಿರೇಬಾಗೇವಾಡಿ: ಆರ್ಥಿಕವಾಗಿ, ಸಾಮಾಜಿಕವಾಗಿ, ಹಿಂದುಳಿದವರ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರವೂ ಸಾಕಷ್ಟು ಅನುದಾನವನ್ನು ಒದಗಿಸುತ್ತಿದ್ದು, ಹಲವಾರು ಯೋಜನೆಗಳನ್ನು ರೂಪಿಸಿ ಸಮುದಾಯದ ಪ್ರಗತಿಗೆ ಶ್ರಮಿಸುತ್ತಿದೆ. ಆದರೆ ಕೆಲ ಸಂದರ್ಭಗಳಲ್ಲಿ ಇಂಥಹ ಹಲವಾರು ಯೋಜನೆಗಳು ಕಾರಣಾಂತರಗಳಿಂದ ಇನ್ನೂ ತಳ ಸಮುದಾಯವನ್ನು ತಲುಪುವಲ್ಲಿ ತೀರಾ ವಿಳಂಬವಾಗುತ್ತಿದೆ.
ಸರ್ಕಾರಗಳು ಯಾವುದಾದರೂ ಅಷ್ಠೆ ! ಆಡಳಿತ ಶಾಹಿಯಲ್ಲಿನ ಜಿಡ್ಡುಗಳಾದ ಈ ಚಲತಾಹೈ ಎಂಬ ಧೋರಣೆ ಹಾಗು ಚುನಾಯಿತ ಜನಪ್ರತಿನಿಧಿಗಳ ಆಲಸೈತನಗಳೆ ಇದಕ್ಕೆ ಮುಖ್ಯ ಕಾರಣ ಎಂಬ ಆರೋಪಗಳು ತಳ ಸಮುದಾಯದ ವಲಯದಿಂದಲೇ ಕೇಳಿ ಬರುತ್ತಿವೆ. ಇದಕ್ಕೊಂದು ನಿದರ್ಶನವೇ ಇಲ್ಲಿನ ವಿದ್ಯಾರ್ಥಿ ವಸತಿ ನಿಲಯ !
07-08-1989 ರಲ್ಲಿ ನಿರ್ಮಾಣವಾದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಕ್ ಪೂರ್ವ ಬಾಲಕರ ವಿದ್ಯಾರ್ಥಿ ವಸತಿ ನಿಲಯದ ಕಟ್ಟಡವು ಯಾವಾಗಲೋ ಜೀರ್ಣಾವಸ್ಥೆಯ ಹಂತ ತಲುಪಿದ್ದು, ಸಾರ್ವಜನಿಕರ ಆಗ್ರಹದ ಮೇರೆಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಕಳೆದ ವರ್ಷವೇ ಶಿಥಿಲಾಸ್ಥೆಯ ಈ ಕಟ್ಟಡವನ್ನು ನೆಲೆಸಮಗೊಳಿಸಲು ಲೋಕೋಪಯೋಗಿ ಇಲಾಖೆಗೆ ಶಿಫಾರಸ್ಸು ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಬೇರೆ ಖಾಸಗಿ ಕಟ್ಟಡದಲ್ಲಿ ಬಾಡಿಗೆ ಆಧಾರದಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿದೆ.