ಬೆಂಗಳೂರು: ಹಲವಾರು ವಿಳಂಬಗಳ ನಂತರ, ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಅಂತಿಮವಾಗಿ ಸಿದ್ಧವಾಗಿದೆ.ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ ಯೆಲ್ಲೋ ಲೈನ್ (ಆರ್ ವಿ ರಸ್ತೆ- ಬೊಮ್ಮಸಂದ್ರ) ಉದ್ದಕ್ಕೂ 3.3 ಕಿ.ಮೀ ಉದ್ದದ ರಸ್ತೆ ಮೇಲ್ಸೇತುವೆ ಪೂರ್ಣಗೊಂಡಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ ಸಿಎಲ್) ತಿಳಿಸಿದೆ.
ಅಧಿಕಾರಿಗಳ ಅಂತಿಮ ತಪಾಸಣೆಯ ನಂತರ ಜೂನ್ 15 ರಂದು ಅಥವಾ ನಂತರ ಮೇಲ್ಸೇತುವೆಯಲ್ಲಿ (ರಾಗಿಗುಡ್ಡದಿಂದ ಸಿಎಸ್ಬಿವರೆಗೆ) ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು.
ಮೇಲ್ಸೇತುವೆಯ ಕೆಳ ಡೆಕ್ ಅನ್ನು ವಾಹನಗಳು ಬಳಸಿದರೆ, ಮೇಲಿನ ಡೆಕ್ ನಮ್ಮ ಮೆಟ್ರೋಗೆ ಇರುತ್ತದೆ. ರಸ್ತೆ ಮೇಲ್ಸೇತುವೆ ಈಗಿರುವ ರಸ್ತೆಯಿಂದ ಎಂಟು ಮೀಟರ್ ಎತ್ತರದಲ್ಲಿದ್ದರೆ, ಮೆಟ್ರೋ ಮಾರ್ಗವು ಮೇಲ್ಮೈಯಿಂದ 16 ಮೀಟರ್ ಎತ್ತರದಲ್ಲಿದೆ. ಜೈಪುರ, ನಾಗ್ಪುರ ಮತ್ತು ಮುಂಬೈನಂತಹ ನಗರಗಳಲ್ಲಿ ರಸ್ತೆ ಮತ್ತು ಮೆಟ್ರೋ ರಚನೆಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ.