ಬೆಂಗಳೂರು, ಜೂನ್ 09: ನರೇಂದ್ರ ಮೋದಿ ಅವರು ಇಂದು ಮೂರನೇ ಬಾರಿಗೆ ಭಾರತದ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಇಂದು ಜೂನ್ 09 ಭಾನುವಾರ ಸಂಜೆ 7.15ಕ್ಕೆ ಮೋದಿ ಪದಗ್ರಹಣ ನಡೆಯಲಿದೆ. ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗುತ್ತಿರುವ ಇಂದಿನ ದಿನ ಹೇಗಿದೆ.
ಜೋತಿಷ್ಯದ ಪ್ರಕಾರ ಇಂದಿನ ದಿನ ವಿಶೇಷ ಹೇಗಿದೆ ಎನ್ನುವುದರ ಬಗ್ಗೆ ವಿವರಣೆ ಇಲ್ಲಿದೆ ಓದಿ.
ದೇಶದ ಪ್ರಧಾನಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಇಂದಿನ ದಿನದ ವಿಶೇಷದ ಬಗ್ಗೆ ವೀಣಾರಾವ್ ವಿಶ್ಲೇಷಿಸಿದ್ದಾರೆ. ಈ ದಿನ ಜ್ಯೇಷ್ಠ ಮಾಸದ ಶುದ್ಧ ತದಿಗೆ ಪುನರ್ವಸು ನಕ್ಷತ್ರ. ಈ ದಿನ ಸಂಜೆ 7.15 ಕ್ಕೆ ವೃಶ್ಚಿಕ ಲಗ್ನದಲ್ಲಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭ ನಡೆಯುತ್ತಿದೆ.
ಈ ದಿನ ಭಾನುವಾರ ರಾಜರಿಗೆ ಒಳ್ಳೆಯದು. ಭಾನುವಾರದ ಅಧಿಪತಿ ಸೂರ್ಯ ಗ್ರಹಗಳ ರಾಜ. ಆದ್ದರಿಂದ ಈ ಮಹೂರ್ತಕ್ಕೆ ರಾಜಬಲ. ಮೋದಿಯವರದು ವೃಶ್ಚಿಕ ರಾಶಿ. ಈ ದಿನದ ಮುಹೂರ್ತ ವೃಶ್ಚಿಕ ಲಗ್ನ. ಈಗ ವೃಶ್ಚಿಕಕ್ಕೆ ಸಂಪೂರ್ಣ ಗುರುಬಲ ಇದೆ.
ವೃಶ್ಚಿಕ ಲಗ್ನದಿಂದ ಏಳನೇ ಮನೆಯಲ್ಲಿ ಗುರು, ಸೂರ್ಯ, ಬುಧ, ಶುಕ್ರ ಇದ್ದಾರೆ. ಏಳನೇ ಮನೆಯಿಂದ ಲಗ್ನವನ್ನು ನೇರವಾಗಿ ನೋಡುತ್ತಾರೆ. ಇದು ಅತ್ಯಂತ ಶಕ್ತಿಯನ್ನು ಕೊಡುತ್ತದೆ. ಭೀಮಬಲ ಕೊಡುತ್ತದೆ. ನಾಲ್ಕನೇ ಮನೆಯಲ್ಲಿ ಶನಿ ಮೂಲ ತ್ರಿಕೋಣ ಸ್ಥಾನದಲ್ಲಿ- ಸ್ವಂತ ಮನೆಯಲ್ಲಿ ಇದ್ದಾನೆ ಇದೂಕೂಡ ಬಲಯುತವಾಗಿದೆ. ಆರನೇ ಮನೆ ಶತ್ರುಸ್ಥಾನ ದಲ್ಲಿ ಕುಜ ಸ್ವಂತ ಮನೆ ಹಾಗೂ ಮೂಲತ್ರಿಕೋಣ ಸ್ಥಾನದಲ್ಲಿ ಇದ್ದಾನೆ.
ಶತ್ರು ಸ್ಥಾನದಲ್ಲಿ ಕುಜ ಇರುವುದು ಬಹಳ ಶಕ್ತಿ. ವೈರಿಗಳನ್ನು ಸದೆ ಬಡಿಯುತ್ತದೆ. ಅರ್ಥಾತ್ ಮೋದಿಯವರ ವೈರಿಗಳನ್ನು ದೂರವಿರಿಸುತ್ತದೆ ಅಥವಾ ಇವರ ತಂಟೆಗೆ ಬರದಂತೆ ಕಾಪಾಡುತ್ತದೆ. ಐದು ವರ್ಷಕಾಲ ಸರ್ಕಾರ ನಿರ್ವಿಘ್ನವಾಗಿ ನಡೆಯುತ್ತದೆ. ಎಂಬ ನಂಬಿಕೆ. ದೇಶಕ್ಕೂ ಶತ್ರುಕಾಟ ಇರುವುದಿಲ್ಲ.
ಪುನರ್ವಸು ನಕ್ಷತ್ರ ಗುರುವಿನ ನಕ್ಷತ್ರ. ಈ ನಕ್ಷತ್ರದಲ್ಲಿ ಏನೇ ಶುಭಕಾರ್ಯ ಮಾಡಿದರೂ ಪುನಃ ಪುನಃ ಮಾಡುತ್ತಾರೆ ಎಂಬ ನಂಬಿಕೆ ಇದೆ. ಹೀಗಾಗಿ ಈ ನಕ್ಷತ್ರ ಬಲದಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೂಬಹುದು. ಅದು ದೇವರಿಚ್ಛೆ. ಹೀಗಾಗಿ ಪ್ರಮಾಣವಚನದ ಸಮಯದ ಮಹೂರ್ತ ಬಹಳ ಪ್ರಶಸ್ತವಾಗಿದೆ. ದಿನ ತಿಥಿ ವಾರ ನಕ್ಷತ್ರ ಲಗ್ನ ಎಲ್ಲವೂ ಮಹೋನ್ನತವಾಗಿದೆ. ಮೋದಿಯವರ ರಾಶಿಗೆ ಗುಣಾತ್ಮಕವಾಗಿದೆ ಎಂದು ವೀಣಾರಾವ್ ವಿಶ್ಲೇಷಿಸಿದ್ದಾರೆ.