ಬೆಂಗಳೂರು, ಜೂನ್ 08: ಮಳೆಗಾಲ ಶುರುವಾಗಿದ್ದು, ಬೆಂಗಳೂರಿನಲ್ಲಿ ಬರುವ ಮಳೆ ಗಾಳಿಗೆ ಮರಗಳು ಧರೆಗುರುಳುವುದು ಸಾಮಾನ್ಯ. ಕಳೆದ ಬಾರಿಯ ಮಳೆಗೆ ನೂರಾರು ಮರಗಳು, ಮರದ ಕೊಂಬೆಗಳು ಮುರಿದು ಬಿದ್ದಿದ್ದವು. ಇದೀಗ ಮರಗಳನ್ನು ತ್ವರಿತವಾಗಿ ತೆರವು ಮಾಡಿ, ಜನ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಬಿಬಿಎಂಪಿ ವ್ಯವಸ್ಥೆ ಮಾಡಿಕೊಂಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಬೃಹತ್ ಮರಗಳು ಧರೆಗುರುಳಿದ್ದು, ಹೆಚ್ಚುವರಿಯಾಗಿ ಕ್ರೇನ್ ಗಳನ್ನು ಹಾಗೂ ಸಿಲ್ಟ್ ಮತ್ತು ಟ್ರ್ಯಾಕ್ಟರ್ ಗಳನ್ನು ಅಗತ್ಯ ಸಿಬ್ಬಂದಿ/ಅಭಿಯಂತರರು/ಅರಣ್ಯ ಸಿಬ್ಬಂದಿ ಬಳಸಿಕೊಂಡು ಮರಗಳನ್ನು ತೆರವುಗೊಳಿಸಲಾಗುತ್ತಿದೆ.
ಪಾಲಿಕೆ ಅರಣ್ಯ ವಿಭಾಗದಿಂದ 39 ಮರ ತೆರವುಗೊಳಿಸುವ ತಂಡಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಧರೆಗುರುಳಿದ ಮರ, ರೆಂಬೆ/ಕೊಂಬೆಗಳನ್ನು ತೆರವುಗೊಳಿಸಲಾಗುತ್ತಿದೆ. ಇದರ ಜೊತೆಗೆ 4 ದ್ವಿಚಕ್ರ ತಂಡಗಳಿಂದಲೂ ಬಿದ್ದಿರುವ ಮರಗಳ ತೆರವು ಕಾರ್ಯ ನಿರಂತರವಾಗಿ ನಡೆಯುತ್ತಿದೆ.