ಬೆಂಗಳೂರು: ರಾಜ್ಯ ಬಿಜೆಪಿ ಕೋರ್ ಕಮಿಟಿಯನ್ನು ಸದ್ಯದಲ್ಲೇ ಪರಿಷ್ಕರಿಸುವ ಬಗ್ಗೆ ವರಿಷ್ಠರು ಚಿಂತನೆ ನಡೆಸಿದ್ದು, ಲೋಕಸಭಾ ಚುನಾವಣೆ ಬೆನ್ನಲ್ಲೇ ರಾಜ್ಯ ಘಟಕಕ್ಕೆ ಮತ್ತೊಂದು ಸುತ್ತಿನ ಕಾಯಕಲ್ಪ ನಿಶ್ಚಿತವಾಗಿದೆ.
ರಾಜ್ಯ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕದ ಬೆನ್ನಲ್ಲೇ ಕೋರ್ ಕಮಿಟಿ ಪರಿಷ್ಕರಣೆ ಸಾಧ್ಯತೆ ಬಗ್ಗೆ ಚರ್ಚೆಗಳು ನಡೆದಿದ್ದವು.
ಆದರೆ ಒಮ್ಮಿಂದೊಮ್ಮೆಲೇ ಹಿರಿಯರನ್ನು ನೇಪಥ್ಯಕ್ಕೆ ಸರಿಸಿದರೆ ಪ್ರತಿಕೂಲ ಪರಿಣಾಮ ಉಂಟಾಗಬಹು ದೆಂಬ ಕಾರಣಕ್ಕೆ ಈ ವಿಚಾರಕ್ಕೆ ಚಾಲನೆ ಕೊಟ್ಟಿರಲಿಲ್ಲ. ಈಗ ರಾಜ್ಯ ಘಟಕದ ನೀತಿ-ನಿರೂಪಣೆ ವಿಭಾಗಕ್ಕೆ ಹೊಸ ನೀರು ಬರುವುದು ಅನಿವಾರ್ಯ ಎಂದು ವರಿಷ್ಠರು ನಿರ್ಧರಿಸಿದ್ದು ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಕೋರ್ ಕಮಿಟಿ ಪರಿಷ್ಕರಣೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸದ್ಯ ಇರುವ ಕೋರ್ ಕಮಿಟಿಯಲ್ಲಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಅರವಿಂದ ಲಿಂಬಾವಳಿ, ಸಿ.ಟಿ.ರವಿ, ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ರಾಜ್ಯ ಸಂಘಟನ ಪ್ರಧಾನ ಕಾರ್ಯದರ್ಶಿ ರಾಜೇಶ್ ಮೊದಲಾದವರು ಇದ್ದಾರೆ. ಈಶ್ವರಪ್ಪ ಅವರನ್ನು ಉಚ್ಚಾಟನೆ ಮಾಡಿರುವುದರಿಂದ ಅವರ ಸದಸ್ಯತ್ವ ತನ್ನಿಂತಾನೇ ರದ್ದಾಗಿದೆ.
ರಾಜ್ಯಾಧ್ಯಕ್ಷರೆಂಬ ಕಾರಣಕ್ಕೆ ವಿಜಯೇಂದ್ರ ಮಾತ್ರ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸುತ್ತಿದ್ದು, ಉಳಿದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಯುವ ಮುಖಂಡರಿಗೆ ಅವಕಾಶ ಲಭಿಸುತ್ತಿಲ್ಲ. ಹೀಗಾಗಿ ಜಾತಿ ಹಾಗೂ ಪ್ರಾದೇಶಿಕತೆ ಆಧಾರದ ಮೇಲೆ ಹೊಸ ಸಮಿತಿ ರಚನೆಯಾಗಲಿದೆ. ಬಿಜೆಪಿ ಮೂಲಗಳ ಪ್ರಕಾರ ಪಟ್ಟಿಯಲ್ಲಿ ಈ ಬಾರಿ ಹೊಸಬರಿಗೆ ಅವಕಾಶ ಸಿಗಲಿದೆ. ಹಾಲಿ ಪಟ್ಟಿಯಲ್ಲಿರುವ ಕೆಲವರು ಉಳಿದುಕೊಳ್ಳುವ ಸಾಧ್ಯತೆಯೂ ಇದೆ.