ಬಾಗಲಕೋಟೆ: ವಿಜಯಪುರದವರು ಇಲ್ಲಿನ ಡಿಸಿಸಿ, ಸಕ್ಕರೆ ಕಾರ್ಖಾನೆ ಮೇಲೆ ಕಣ್ಣಿಟ್ಟು ಬಂದಿದ್ದಾರೆ ಎಂಬ ಬಿಜೆಪಿ ಶಾಸಕ ಯತ್ನಾಳ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಶಿವಾನಂದ ಪಾಟೀಲ, ನಾನು ಯಾವುದೇ ಸಂಘ-ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಬಂದಿಲ್ಲ.ಈ ಜಿಲ್ಲೆಯ ಜನರ ಸೇವೆ ಮಾಡಲು ಬಂದಿದ್ದೇನೆ ಎಂದು ತಿರುಗೇಟು ನೀಡಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಳೆದ 1987ರಿಂದ ರಾಜಕೀಯದಲ್ಲಿ ಇದ್ದೇನೆ. ಒಂದು ಸಣ್ಣ ಟಿಎಪಿಸಿಎಂಎಸ್ ನಿಂದ ರಾಜಕೀಯ ಆರಂಭಿಸಿದ್ದು, ಅದಕ್ಕೆ ದೊಡ್ಡ ಆಸ್ತಿ ಮಾಡಿದ್ದೇನೆ. ವಿಜಯಪುರ ನಗರಸಭೆ
ಅಧ್ಯಕ್ಷನಾಗಿದ್ದಾಗ ಶಾಸ್ತ್ರಿ ಮಾರುಕಟ್ಟೆ ಕಟ್ಟಿ ಆದಾಯ ಬರುವ ಕೆಲಸ ಮಾಡಿದ್ದೇನೆ. ಆಗ ವಿಜಯಪುರ ನಗರಸಭೆಗೆ 3,700 ಆಸ್ತಿಗಳು ಉಳಿಸಿದ್ದೆ. ಆದರೆ, ಅವುಗಳನ್ನು ಮಾರಾಟ ಮಾಡಿದವರು ಯಾರು ಎಂಬುದು ಯತ್ನಾಳಗೆ ಗೊತ್ತಿದೆ. ಬಿಜೆಪಿಯ ಇಬ್ಬರು ಶಾಸಕರೇ ನಗರಸಭೆ ಆಸ್ತಿ ಮಾರಲು ಕಾರಣ. ಇದರ ಬಗ್ಗೆ ಯತ್ನಾಳ ಹೇಳಲಿ ಎಂದು ಸವಾಲು ಹಾಕಿದರು.
ಬ್ಯಾಂಕ್-ಕಾರ್ಖಾನೆ ಹಾಳು ಮಾಡಿಲ್ಲ:
ಬಸವನಬಾಗೇವಾಡಿಯಲ್ಲಿ ಸರ್ಕಾರದಿಂದಲೇ ಎರಡು ಮಾದರಿ ಮೆಗಾ ಮಾರುಕಟ್ಟೆ ಮಳಿಗೆ ಕಟ್ಟಿದ್ದೇನೆ. ರಾಜ್ಯದಲ್ಲೇ ಮಾದರಿಯಾದ ಕಲ್ಯಾಣ ಮಂಟಪ ಕಟ್ಟಲಾಗಿದೆ. ನಾನು ಕಟ್ಟಿದ ಕಟ್ಟಡಗಳನ್ನು ಹೋಗಿ ಎಣಿಸಿಕೊಂಡು ಬರಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಿಕ ಪದ ಬಳಕೆಯೂ ಮಾಡಬೇಕು ಎಂದರು.
ಯತ್ನಾಳರು ಸಿದ್ದೇಶ್ವರ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಅದು ಸೂಪರ್‌ಸೀಡ್ ಹಂತಕ್ಕೆ ಬಂದಿತ್ತು. ತಮ್ಮ ಸ್ವಂತ ಸಿದ್ದಸಿರಿ ಪತ್ತಿನ ಸಂಘ ಕಟ್ಟಿಕೊಂಡರು. ಇಂಡಿ ತಾಲೂಕಿನಲ್ಲಿ ನಾನು-ಅವರು ಕೂಡಿಯೇ ಸಕ್ಕರೆ ಕಾರ್ಖಾನೆ ಕಟ್ಟಿದ್ದೆವು. ಅದನ್ನೂ ಹಾಳು ಮಾಡಿದರು. ಹಲವು ರೈತರು, ಲಕ್ಷಾಂತರ ಹಣ ಬೋಜಾದಿಂದ ಸಂಕಷ್ಟದಲ್ಲಿದ್ದರು. ನಾನೇ ಅವರಿಗೆ ಹಣ ಕೊಡಿಸಿದೆ. ವಿಜಯಪುರ-ಬಾಗಲಕೋಟೆ ಜಿಲ್ಲೆಯಲ್ಲಿ 24 ಸಕ್ಕರೆ ಕಾರ್ಖಾನೆಗಳಿವೆ. ಪ್ರತಿಯೊಂದಕ್ಕೂ ನಾನು ಅಧ್ಯಕ್ಷನಾಗಿರುವ ಡಿಸಿಸಿ ಬ್ಯಾಂಕ್‌ನಿಂದ ಆರ್ಥಿಕ ನೆರವು ಕೊಡಿಸಿದ್ದೇನೆ. ಈತ ತನ್ನ ಸ್ವಂತದ ಕಾರ್ಖಾನೆ ಕಟ್ಟಿಕೊಂಡಿದ್ದಾನೆ. ಅದನ್ನು ಹೇಗೆ ಕಟ್ಟಿದ ಎಂದು ಹೇಳಲಿ ಎಂದು ಸವಾಲು ಹಾಕಿದರು.
ಮೋದಿ ತಿರುಗಿಯೂ ನೋಡಲಿಲ್ಲ: ಮಾತೆತ್ತಿದರೆ ಮೋದಿ ಎಂದು ಹೇಳುತ್ತಾರೆ. ಮೊನ್ನೆ ಬಾಗಲಕೋಟೆಯಲ್ಲಿ ಮೂರು ಬಾರಿ ನಮಸ್ಕಾರ ಮಾಡಿದರೂ ಮೋದಿ ಇವರತ್ತ ತಿರುಗಿಯೂ ನೋಡಲಿಲ್ಲ. ಇನ್ಯಾದರೂ ಮೋದಿ ಹೆಸರು ಹೇಳುವುದು ಬಿಡಲಿ ಎಂದರು.
Laxmi News 24×7