ಬಾಗಲಕೋಟೆ: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದ್ದು, ತಮ್ಮ ಕ್ಷೇತ್ರಗಳಿಂದ ಎದುರಾಳಿಗೆ ಭರ್ಜರಿ ಪೈಪೋಟಿ ಕೊಡಲು ಪಕ್ಷಗಳಲ್ಲಿ ಸಕಲ ತಯಾರಿ ನಡೆಯುತ್ತಿದೆ. ಆದರೆ, ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಚಾರದಲ್ಲಿ ಮಾತ್ರ ಅಸಮಾಧಾನ ಮುಗಿಯದ ಕಥೆಯಾಗಿತ್ತು.ಕೈ ಟಿಕೆಟ್ ಪಡೆದು ಚುನಾವಣೆ ಅಖಾಡಕ್ಕೆ ದುಮುಕಿದ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ವಿರುದ್ಧ ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ್ ತೀವ್ರ ಅಸಮಾಧಾನ ಹೊರಹಾಕಿದ್ದರು.
ಕಳೆದ ಹಲವು ದಿನಗಳಿಂದ ಕೈ ಟಿಕೆಟ್ ತಪ್ಪಿದ ಬೆನ್ನಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ವೀಣಾ, ತಾನು ಪಕ್ಷೇತರ ಅಭ್ಯರ್ಥಿಯಾಗಿ ಆದರೂ ಚುನಾವಣೆ ಕಣಕ್ಕೆ ಇಳಿಯುವೆ ಎಂದಿದ್ದರು. ಸಿಎಂ, ಡಿಎಸಿಂ ಸಭೆ ನಡೆಸಿದರು ಕೂಡ ಶಮನವಾಗದ ವೀಣಾಗೆ ಕಾಂಗ್ರೆಸ್ ನಾಯಕರು ಸಲಹೆ ನೀಡಿದರು. ಇದ್ಯಾವುದಕ್ಕೂ ಜಗ್ಗದ ವೀಣಾ ಕಾಶಪ್ಪನವರ್ ತಮ್ಮ ಬೇಸರಕ್ಕೆ ಟಿಕೆಟ್ ಮಾತ್ರ ಉತ್ತರ ಎಂದು ಕುಳಿತ್ತಿದ್ದರು. ಇದೀಗ ಅವರ ಪತಿ ಶಾಸಕ ವಿಜಯಾನಂದ ಕಾಶಪ್ಪನವರ್ ‘ಕೈ’ ಶಾಸಕರ, ಹಿರಿಯ ಮುಖಂಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ, ಕಡೆಗೂ ಸಂಯುಕ್ತಾಗೆ ಬೆಂಬಲ ಸೂಚಿಸಿದ್ದಾರೆ.
ಸಚಿವರಾದ ಶಿವಾನಂದ ಪಾಟೀಲ್, ಆರ್.ಬಿ. ತಿಮ್ಮಾಪುರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ಅಸಮಾಧಾನಿತ ವೀಣಾ ಕಾಶಪ್ಪನವರ್ ಪತಿ ಶಾಸಕ ವಿಜಯಾನಂದ ಕಾಶಪ್ಪನವರ್, ಪಕ್ಷದ ನಿರ್ಧಾರದಂತೆ ಸಂಯುಕ್ತಾ ಪಾಟೀಲ್ ಗೆಲುವಿಗೆ ಶ್ರಮಿಸುವ ಅಭಯ ಹೊಂದಿದ್ದೇನೆ ಎಂದರು. ಆದರೆ, ಈ ಸಭೆಗೆ ವೀಣಾ ಮಾತ್ರ ಗೈರಾಗಿದ್ದಾರೆ. ಈ ಮೂಲಕ ತನ್ನ ಅಸಮಾಧಾನ ಇನ್ನೂ ಇಳಿದಿಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.