ಹೈದರಾಬಾದ್‌ನಲ್ಲಿ (Hyderabad) ಅಚ್ಚರಿಯ ಘಟನೆಯೊಂದು ನಡೆದಿದೆ. ಕಳೆದ ಒಂದೆರಡು ದಿನಗಳಿಂದ ತೆಲುಗು ಜನರು ತಾಯಿ ಮತ್ತು ಮಗಳ ಧೈರ್ಯವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಅಷ್ಟಕ್ಕೂ ಆ ತಾಯಿ ಮಗಳು ಮಾಡಿದ (Robbery case) ಸಾಹಸ ಅಂತಿದ್ದಲ್ಲ.
ಹೌದು.. ಹೈದರಾಬಾದ್‌ನಲ್ಲಿ ಇಬ್ಬರು ದರೋಡೆಕೋರರನ್ನು ತಾಯಿ ಮತ್ತು ಮಗಳು ಮಟ್ಟ ಹಾಕಿದ ಘಟನೆ ನಡೆದಿದೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ದರೋಡೆಕೋರರನ್ನು ಧೈರ್ಯದಿಂದ ಹೊಡೆದೋಡಿಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಹೈದರಾಬಾದ್ ಪೊಲೀಸರು ಆ ತಾಯಿ ಮಗಳ ಧೈರ್ಯಕ್ಕೆ ಸಲಾಂ ಹೇಳಿ ಸನ್ಮಾನ ಮಾಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?
ಹೈದರಾಬಾದ್‌ನ ಬೇಗಂಪೇಟೆಯಲ್ಲಿರುವ ಉತ್ತರ ಪ್ರದೇಶದ ಕಾನ್ಪುರದ ನಿವಾಸಿಗಳಾದ ಇಬ್ಬರು ದರೋಡೆಕೋರರು ಕಳೆದ ಕೆಲವು ದಿನಗಳಿಂದ ಪಕ್ಕಾ ಪ್ಲಾನ್ ಮಾಡಿ ಶಸ್ತ್ರಸಜ್ಜಿವಾಗಿ ಡೆಲಿವರಿ ಬಾಯ್ ವೇಷ ಧರಿಸಿ ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ದೋಚಲು ಮನೆಗೆ ನುಗ್ಗಿದ್ದರು. ಆದರೆ ಸಮರ ಕಲೆಯಲ್ಲಿ ನುರಿತ ಧೈರ್ಯಶಾಲಿ ಮಹಿಳೆ ಮತ್ತು ಆಕೆಯ ಚಿಕ್ಕ ಮಗಳು ಇಬ್ಬರನ್ನೂ ಮಟ್ಟಹಾಕಿ ಹೊಡೆದೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಉತ್ತರ ಪ್ರದೇಶದ ಕಾನ್ಪುರದ ನಿವಾಸಿಗಳಾದ ಇಬ್ಬರೂ ಶಂಕಿತರು ಮನೆಯನ್ನು ಈ ಮೊದಲೇ ಪತ್ತೆಹಚ್ಚಿ ನಂತರ ಪ್ಲಾನ್ ಮಾಡಿ ದರೋಡೆ ಮಾಡಲು ಪ್ಲಾನ್ ರೂಪಿಸಿದ್ದರು. ಕೃತ್ಯದ ಹಿಂದಿನ ದಿನ ಮಧ್ಯಾಹ್ನ 1 ಗಂಟೆ ಸುಮಾರಿಗೆ ತನ್ನನ್ನು ಡೆಲಿವರಿ ಬಾಯ್ ಎಂದು ಪರಿಚಯಿಸಿಕೊಂಡು ಮನೆಗೆ ಪ್ರವೇಶಿಸಿದ್ದಾನೆ. ಈ ವೇಳೆ ಮನೆಯ ಯಜಮಾನ ಅಮಿತಾ ಮಹ್ನೋತ್ ಮನೆಯಲ್ಲಿ ಉಪಸ್ಥಿತರಿದ್ದರೂ, ಅಲ್ಲಿಯೇ ಎಲ್ಲಾ ಕಣ್ಣಾಲಿಸಿ ದರೋಡೆಗೆ ಪ್ಲಾನ್ ಮಾಡಿ ಮನೆಯಿಂದ ಹೊರ ಬಂದಿದ್ದಾನೆ.
ನಂತರ ಮರುದಿನ ಇಬ್ಬರು ವ್ಯಕ್ತಿಗಳು ಮನೆಗೆ ನುಗ್ಗಿದ್ದು, ಅದರಲ್ಲಿ ಒಬ್ಬ ಹೆಲ್ಮೆಟ್ ಧರಿಸಿದ್ದ. ಇನ್ನೊಬ್ಬ ತನ್ನ ಗುರುತನ್ನು ಮರೆಮಾಡಲು ಮುಖಕ್ಕೆ ಮಾಸ್ಕ್ ಧರಿಸಿದ್ದಾನೆ. ದರೋಡೆ ಮಾಡುವ ಉದ್ದೇಶದಿಂದ ಮನೆಗೆ ನುಗ್ಗಿದ ಕಿರಾತಕರ ಪೈಕಿ ಒಬ್ಬನು ನೇರವಾಗಿ ಅಡುಗೆಮನೆಗೆ ನುಗ್ಗಿಅಡುಗೆ ಕೆಲಸ ಮಾಡುತ್ತಿದ್ದ ಕೆಲಸದಾಕೆಯ ಕುತ್ತಿಗೆಗೆ ಚಾಕು ಹಿಡಿದು ಬೆದರಿಕೆ ಹಾಕಿದ್ದಾನೆ. ಆಗ ಅಮಿತಾ ಅವರ ಹದಿಹರೆಯದ ಮಗಳು ಮನೆಯೊಳಗೆ ನುಗ್ಗುತ್ತಿದ್ದ ಇನ್ನೊಬ್ಬನನ್ನು ಧೈರ್ಯದಿಂದ ಎದುರಿಸಿದ್ದಾಳೆ. ಆಗ ಅಲ್ಲಿ ಜಗಳ ನಡೆದಿದೆ.
ನಂತರ 46 ವರ್ಷದ ತಾಯಿ ಅಮಿತಾ ಕೂಡ ಹೋರಾಟ ಮಾಡಿದ್ದು, ಆಗ ಪರಸ್ಪರ ಕಿತ್ತಾಟ ನಡೆಯುತ್ತಿದ್ದ ಸಂದರ್ಭದಲ್ಲಿ, ಶಂಕಿತರಲ್ಲಿ ಒಬ್ಬ ಪಿಸ್ತೂಲ್ ಅನ್ನು ಹೊರತೆಗೆದು ತಾಯಿ ಮತ್ತು ಮಗಳನ್ನು ಹೆದರಿಸಲು ಪ್ರಯತ್ನಿಸಿದ್ದಾನೆ. ಆದರೆ ಅದಕ್ಕೆ ಬಗ್ಗದ ಅಮಿತಾ ಅವರು ತನ್ನ ಸಮರ ಕಲೆಗಳ ಕೌಶಲ್ಯದಿಂದ ಆತನ ಜೊತೆ ಹೋರಾಡಿ ಪಿಸ್ತೂಲ್ ಅನ್ನು ಕೆಳಕ್ಕೆ ಬೀಳಿಸಿದ್ದಾರೆ. ಅಲ್ಲದೇ ಆತನಿಗೆ ಸರಿಯಾಗಿ ಹೊಡೆದಿದ್ದಾರೆ. ಇನ್ನು ಇಲ್ಲಿ ನಿಂತರೆ ಆಗಲ್ಲ ಅಂದ್ಕೊಂಡು ಇಬ್ಬರು ಕಿರಾತಕರು ಮನೆಯಿಂದ ಹೊರಗೆ ಓಡಲು ಶುರು ಮಾಡಿದ್ದಾರೆ.
ಅಷ್ಟರಲ್ಲಿ ಅಕ್ಕಪಕ್ಕದ ಮನೆಯವರು ಸದ್ದು ಕೇಳಿ ಓಡಿ ಬಂದಿದ್ದು, ಸ್ಥಳೀಯರು ಒಬ್ಬ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಬ್ಬ ಅಲ್ಲಿಂದ ಪರಾರಿಯಾಗಿದ್ದು, ನಂತರ ಪೊಲೀಸರು ಆತನನ್ನೂ ಖೆಡ್ಡಾಗೆ ಬೀಳಿಸಿದ್ದಾರೆ. ಕಿರಾತಕರು ದರೋಡೆಗೆ ಪ್ಲಾನ್ ಮಾಡಿದ ಮನೆ ಶ್ರೀಮಂತರ ಮನೆಯಾಗಿದ್ದು, ಎಲ್ಲಾ ಮೊದಲೇ ತಿಳಿದುಕೊಂಡು ದೋಚಲು ಬಂದು ವಿಫಲರಾಗಿದ್ದಾರೆ.
ಸದ್ಯ ತಾಯಿ ಮಗಳ ಶೌರ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಪೊಲೀಸರು ಮನೆಗೆ ಬಂದು ಅವರಿಬ್ಬರನ್ನೂ ಶ್ಲಾಘಿಸಿ ಸನ್ಮಾನಿಸಿದ್ದಾರೆ.
Laxmi News 24×7