ಹುಬ್ಬಳ್ಳಿ: ವಿಧಾನ ಪರಿಷತ್ತು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ವಿಧಾನಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮರಿತಿಬ್ಬೇಗೌಡ, ನಾನು ಸ್ವಇಚ್ಛೆಯಿಂದ ಪರಿಷತ್ತು ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ.
ಜೆಡಿಎಸ್ ನಲ್ಲಿ ಜಾತ್ಯತೀತ ತತ್ವಗಳು ಉಳಿದಿಲ್ಲ. ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ. ಈ ಬಗ್ಗೆ ಪಕ್ಷದ ವರಿಷ್ಠರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜವಾಗಿಲ್ಲ ಎಂದರು.
ನಾಲ್ಕು ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದೇನೆ. ಅಧಿವೇಶನದಲ್ಲಿ ವಿಷಯಾಧಾರಿತವಾಗಿ ಬೆಂಬಲ ನೀಡಿದ್ದೇನೆ. ಕೃಷಿ, ಎಪಿಎಂಸಿ ಕಾಯ್ದೆಗಳ ವಿಚಾರದಲ್ಲಿ ಜೆಡಿಎಸ್ ಅಂದಿನ ಆಡಳಿತ ಪಕ್ಷದ ಪರ ನಿಂತಿತು. ಆದರೆ ನಾನು ಆತ್ಮಸಾಕ್ಷಿ ಅನುಗುಣವಾಗಿ ರೈತರ ಪರ ನಿಲುವು ತಳೆದಿದ್ದೆ. ಜೆಡಿಎಸ್ ನಲ್ಲಿ ಯಾವುದೇ ಪ್ರಮುಖ ತೀರ್ಮಾನಗಳಲ್ಲಿ ಪಕ್ಷದ ಶಾಸಕರು, ನಾಯಕರನ್ನು ಕೇಳುತ್ತಿಲ್ಲ. ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಅವರೇ ನಿರ್ಣಯಿಸುತ್ತಾರೆ ಎಂದರು.