ಬೆಳಗಾವಿ: ರಾಜ್ಯದಲ್ಲಿ ತಲೆದೋರಿರುವ ಬರಗಾಲದ ಹೊಡೆತ ಮೀನು ಸಾಕಾಣಿಕೆ ಮೇಲೂ ಬಿದ್ದಿದ್ದು, ಬಹುತೇಕ ಕೆರೆಗಳಲ್ಲಿ
ನೀರಿನ ಅಭಾವದಿಂದ ಮೀನು ಉತ್ಪಾದನೆ ಇಳಿಮುಖಗೊಂಡಿದೆ. ಮೀನು ಸಾಕಾಣಿಕೆ ಮಾಡುವ ಕುಟುಂಬಗಳು ಸಂಕಷ್ಟಕ್ಕೀಡಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಕೇವಲ 127 ಕೆರೆಗಳಲ್ಲಿ ಮೀನಿನ ಮರಿ ಬಿತ್ತನೆ ಮಾಡಲಾಗಿದೆ.
ಕಳೆದ ವರ್ಷ ಮೀನು ಉತ್ಪಾದನೆಯಲ್ಲಿ ಆದ ಲಾಭ ಈ ಬಾರಿ ಸಿಗುವುದು ಅಸಾಧ್ಯವಾಗಿದೆ. ಕೆರೆಗಳಲ್ಲಿ ನೀರಿನ ಕೊರತೆ ಮೀನುಗಳ ಹುಟ್ಟು ಹಾಗೂ ಬೆಳವಣಿಗೆ ಮೇಲೆ ಭಾರೀ ಪರಿಣಾಮ ಬೀರಿದೆ. ಮತ್ಸ್ಯೋದ್ಯೋಗವನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿರುವ ಕುಟುಂಬಗಳ ಮೇಲೆ ಭಾರೀ ಹೊಡೆತ ಬಿದ್ದಿದೆ. ಮೀನುಗಾರಿಕೆ ಇಲಾಖೆಯ ಬೆಳಗಾವಿ ವಿಭಾಗವು ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳನ್ನು ಒಳಗೊಂಡಿದೆ. 2023-24ರಲ್ಲಿ 785 ಕೆರೆಗಳಲ್ಲಿ ಮೀನು ಸಾಕಾಣಿಕೆ ಮಾಡಲು ಉದ್ದೇಶ ಹೊಂದಲಾಗಿತ್ತು.
ಆದರೆ ನೀರಿನ ಕೊರತೆ, ಬರಗಾಲದ ಸಂಕಷ್ಟದಿಂದ ಕೇವಲ 522 ಕೆರೆಗಳಲ್ಲಿ ಮೀನಿನ ಮರಿಗಳ ಬಿತ್ತನೆ ಮಾಡಲಾಗಿದೆ. ಹಾವೇರಿ ಜಿಲ್ಲೆಯ ಅತಿ ಹೆಚ್ಚು 179 ಕೆರೆಗಳಲ್ಲಿ ಮರಿಗಳನ್ನು ಬಿಡಲಾಗಿದೆ. ಗದಗ ಜಿಲ್ಲೆಯಯಲ್ಲಿ ಅತಿ ಕಡಿಮೆ ಎಂದರೆ 34 ಕೆರೆಗಳಲ್ಲಿ ಮರಿಗಳ ಬಿತ್ತನೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 127, ಧಾರವಾಡದಲ್ಲಿ 105, ವಿಜಯಪುರ 48, ಬಾಗಲಕೋಟೆ ಜಿಲ್ಲೆಯ 34 ಕೆರೆಗಳಲ್ಲಿ ಮೀನಿನ ಮರಿಗಳನ್ನು ಬಿಡಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅತಿ ಕಡಿಮೆ ಕೆರೆಗಳಲ್ಲಿ ಮೀನಿನ ಮರಿಗಳನ್ನು ಬಿಡಲಾಗಿದೆ. ಅಂದುಕೊಂಡಷ್ಟು ಮೀನಿನ ಉತ್ಪಾದನೆ ಆಗುವುದಿಲ್ಲ. 2022-23ರಲ್ಲಿ 618 ಕೆರೆಗಳಲ್ಲಿ 3.33 ಟನ್ ಮೀನಿನ ಮರಿಗಳನ್ನು ಬಿಡಲಾಗಿತ್ತು. ಅದರಿಂದ 1,03978 ಟನ್ ಮೀನಿನ ಉತ್ಪಾದನೆ ಆಗಿತ್ತು. ಈ ವರ್ಷ 4.47 ಕೋಟಿ ಮೀನಿನ ಮರಿಗಳನ್ನು ಬಿಟ್ಟರೂ 1.26 ಲಕ್ಷ ಟನ್ ಮೀನು ಉತ್ಪಾದನೆ ಆಗುವ ಉದ್ದೇಶ ಇದೆ. ಈವರೆಗೆ 3.13 ಕೋಟಿ ಮೀನುಗಳ ಪೈಕಿ 70 ಸಾವಿರ ಟನ್ ಉತ್ಪಾದನೆ ಆಗಿದೆ.