ಬೆಂಗಳೂರು, ಮಾರ್ಚ್ 20: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ಇಪ್ಪತ್ತು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಇನ್ನು ಉಳಿದ 5 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಅಳೆದು ತೂಗಿ ಅಭ್ಯರ್ಥಿ ಆಯ್ಕೆ ನಡೆಯುತ್ತಿದೆ. ಹೀಗಾಗಿಯೇ ಐದು ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಕಾತುರ ಹೆಚ್ಚಾಗಿಯೇ ಇದೆ.ಅಭ್ಯರ್ಥಿ ಘೋಷಣೆ ಬಳಿಕ ರಾಜ್ಯದಲ್ಲಿ ಎದ್ದಿರುವ ಬಂಡಾಯ ಶಮನಕ್ಕೆ ಪ್ರಯತ್ನ ತುಸು ಹೆಚ್ಚಾಗಿಯೇ ಇದೆ.
ಕುತೂಹಲಗಳ ಬೆನ್ನಲ್ಲೇ, ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ರಾಜ್ಯದ ಉಳಿದ ಐದು ಲೋಕಸಭಾ ಸ್ಥಾನಗಳಿಗೆ ಪಕ್ಷವು ಶುಕ್ರವಾರದೊಳಗೆ (ಮಾರ್ಚ್ 22) ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ ಎಂದು ಬುಧವಾರ ಹೇಳಿದ್ದಾರೆ. ರಾಜ್ಯದ ಲಿಂಗಾಯತ ಸಮುದಾಯದ ಪ್ರಬಲ ವ್ಯಕ್ತಿ ಮತ್ತು ಪಕ್ಷದ ಪ್ರಮುಖರಾದ ಬಿಎಸ್ ಯಡಿಯೂರಪ್ಪ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ನಿನ್ನೆ ನಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಉಳಿದ ಐದು ಕ್ಷೇತ್ರಗಳ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದೇವೆ.
ಮಾರ್ಚ್ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿದ ನಂತರ ಅಂತಿಮ ನಿರ್ಧಾರವನ್ನು ಪ್ರಕಟಿಸಲಾಗುವುದು” ಎಂದು ಹೇಳಿದ್ದಾರೆ.ರಾಜ್ಯದಲ್ಲಿ ಬಿಜೆಪಿ ಮತ್ತೆ ಗೆಲುವಿನ ದಾಖಲೆ ಬರೆಯುವುದಾಗಿ, ಪಕ್ಷ ಗೆಲುವು ದಾಖಲಿಸುವುದಾಗಿ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Laxmi News 24×7