ಬೆಂಗಳೂರು, ಮಾರ್ಚ್ 19: ಪತ್ನಿಗೆ ಇಮೇಲ್ ಮೂಲಕ ಅಶ್ಲೀಲ ವೀಡಿಯೋ ಕಳುಹಿಸಿದ 30ರ ಹರೆಯದ ವ್ಯಕ್ತಿಯೊಬ್ಬನನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ (IT Act) ಅಪರಾಧಿ ಎಂದು ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದ್ದು, ಒಂದು ತಿಂಗಳ ಜೈಲು ಶಿಕ್ಷೆ ಮತ್ತು 45,000 ರೂ. ದಂಡ ವಿಧಿಸಿದೆ. ರಾಜಾಜಿನಗರದ (Rajajinagar) ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆರೋಪಿಯ ವಿರುದ್ಧ ಸಿಐಡಿ ಪೊಲೀಸರು (CID Police) ದೋಷಾರೋಪ ಹೊರಿಸಿದ್ದರು. ಶಿಕ್ಷೆಗೊಳಗಾದ ವ್ಯಕ್ತಿಯ ಪತ್ನಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ.

2016 ರಲ್ಲಿ ಇಬ್ಬರೂ ಮದುವೆಯಾಗಿದ್ದರು. ನಂತರದಲ್ಲಿ ಅವರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿತ್ತು. ಬಳಿಕ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ತನಿಖಾಧಿಕಾರಿಯೊಬ್ಬರು ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಅಶ್ಲೀಲ ವಿಡಿಯೋ ಕಳುಹಿಸಿದ್ದ ಬಗ್ಗೆ ಸಂತ್ರಸ್ತೆಯ ಕಿರಿಯ ಸಹೋದರ ದೂರು ದಾಖಲಿಸಿದ್ದರು. ನಂತರ ಮಹಿಳೆ ಕೂಡ ಬೆಂಗಳೂರಿಗೆ ಆಗಮಿಸಿ ದೂರು ನೀಡಿದ್ದರು. ಅದರಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಆರೋಪಿಯು ಅಶ್ಲೀಲ ವೀಡಿಯೊ ಲಿಂಕ್ ಅನ್ನು ಆತನ ಪತ್ನಿಗೆ ಕಳುಹಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿ ಉಲ್ಲೇಖಿಸಿದೆ.
ಇತ್ತೀಚೆಗೆ ನಡೆದ ಇನ್ನೊಂದು ಘಟನೆಯಲ್ಲಿ ಪತ್ನಿಯು ಪತಿಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಿವಾಹ ವಾರ್ಷಿಕೋತ್ಸವದ ಉಡುಗೊರೆ ಕೊಡದ ಕಾರಣ 35 ವರ್ಷದ ಮಹಿಳೆ ಪತಿ ಮಲಗಿದ್ದಾಗ ಅಡುಗೆಮನೆಯ ಚಾಕುವನ್ನು ಬಳಸಿ ಕೈಗೆ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಚ್ಚೆತ್ತುಕೊಂಡ ಪತಿಯು ಪತ್ನಿಯನ್ನು ದೂರ ತಳ್ಳಿ ಅಕ್ಕಪಕ್ಕದವರ ಸಹಾಯ ಪಡೆದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
Laxmi News 24×7