ಬೆಳಗಾವಿ, ಮಾರ್ಚ್ 03: ಭೀಕರ ಬರಗಾಲದಿಂದ (Drought) ರಾಜ್ಯದ ಜಲಾಶಯಗಳು ಭಣಗುಡುತ್ತಿವೆ. ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಬೇಸಿಗೆ ಆರಂಭದಲ್ಲೇ ಜಲಕ್ಷಾಮದ ಬಿಸಿ ರಾಜ್ಯಕ್ಕೆ ತಟ್ಟಿದೆ. ಹನಿ ನೀರಿಗೂ ಪರದಾಡುವಂತೆ ಪರಿಸ್ಥಿತಿ ಎದುರಾಗಿದೆ. ಇನ್ನು ಬೆಳಗಾವಿ (Belagavi) ಮತ್ತು ಬಾಗಲಕೋಟೆ (Bagalkote) ಜಿಲ್ಲೆಗಳಿಗೆ ಜೀವನಾಡಿಯಾಗಿರುವ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ (Hidkal Dam) ಬರಿದಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಜನ ಪರಿತಪ್ಪಿಸುತ್ತಿದ್ದಾರೆ. ಬೆಳಗಾವಿಯ ಮತ್ತು ಬಾಗಲಕೋಟೆ ಜಿಲ್ಲೆ ಜೀವನಾಡಿ ಆಗಿರುವ ಹಿಡಕಲ್ ಜಲಾಶಯದಲ್ಲಿ ಅರ್ಧದಷ್ಟು ನೀರು ಖಾಲಿಯಾಗಿದ್ದು, ಜಲಕ್ಷಾಮದ ಆತಂಕ ತಲೆದೋರಿದೆ.
ಒಟ್ಟು 51 ಟಿಎಂಸಿ ಸಾಮರ್ಥ್ಯದ ಹಿಡಕಲ್ ಡ್ಯಾಂನಲ್ಲಿ, 25 ಟಿಎಂಸಿ ಮಾತ್ರ ನೀರಿದೆ. ನೀರಿಗೆ ಅಭಾವ ತಲೆದೋರುವ ಮುನ್ಸೂಚನೆ ಸಿಗುತ್ತಿದ್ದಂತೆ, ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತುರ್ತು ಸಭೆ ನಡೆಸಿದರು. ನೀರು ಮತ್ತು ಮೇವಿನ ಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಜನರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
12 ವರ್ಷಗಳ ನಂತರ ದೇವಾಲಯ ಪತ್ತೆ
ಕಳೆದ ವರ್ಷ ಬೇಸಿಗೆಗಾಲದಲ್ಲಿ ಹಿಡಕಲ್ ಅಣೆಕಟ್ಟು ಸಂಪೂರ್ಣ ಬರಿದಾಗಿತ್ತು. ಈ ಸಮಯದಲ್ಲಿ ಅಣೆಕಟ್ಟಿನ ಹಿನ್ನೀರಿನಡಿಯಲ್ಲಿ ಮುಳುಗಡೆಯಾಗಿದ್ದ ಪುರಾತನ ವಿಠಲ ದೇವಸ್ಥಾನವು ಸರಿಯಾಗಿ 12 ವರ್ಷಗಳ ನಂತರ ಪತ್ತೆಯಾಗಿತ್ತು. ಅದು ಕೂಡ ಆಷಾಢ ಏಕಾದಶಿಯ ಶುಭದಿನದಂದು ವಿಠಲ ದೇವಸ್ಥಾನ ಕಾಣಿಸಿಕೊಂಡಿತ್ತು. ಇದರಿಂದ ಹರ್ಷಗೊಂಡಿದ್ದ ಭಕ್ತರು ದರ್ಶನ ಮತ್ತು ಪ್ರಾರ್ಥನೆ ಸಲ್ಲಿಸಿದ್ದರು.