Breaking News

ಲೋಕಸಭಾ ಚುಣಾವಣೆಗೆ ಬಿಜೆಪಿ 100 ಅಭ್ಯರ್ಥಿಗಳ ಪಟ್ಟಿ ರೆಡಿ..! ಈ ಬಾರಿ ಮೋದಿ, ಅಮಿತ್ ಶಾ, ಸಿಂಗ್​ ಕಣಕ್ಕಿಳಿಯೋದು ಇಲ್ಲಿಂದ!

Spread the love

ಬೆಂಗಳೂರು: ಲೋಕಸಭೆ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿರುವ ನಡುವೆಯೇ, ಬಿಜೆಪಿ ಗುರುವಾರ 100 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಈ ಪಟ್ಟಿಯಲ್ಲಿ ಪಕ್ಷದ ಪ್ರಭಾವಿ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್​ ಸೇರಿ ಈ ಮೂವರು ಕಾಣಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆಗೆ ಸಂಬಂಧಿಸಿದಂತೆ ಹಲವು ರಾಜ್ಯಗಳ ಬಿಜೆಪಿ ನಾಯಕರ ಜೊತೆ ವರಿಷ್ಠರು ಬುಧವಾರ ರಾತ್ರಿ 10.30ಕ್ಕೆ ಆರಂಭವಾದ ಸಭೆ ನಾಲ್ಕು ಗಂಟೆಗೂ ಹೆಚ್ಚು ಕಾಲ ನಡೆಯಿತು. ಉತ್ತರ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಗುಜರಾತ್, ಅಸ್ಸಾಂ, ಕೇರಳ ಮತ್ತು ತೆಲಂಗಾಣ ಸೇರಿದಂತೆ ಪ್ರಮುಖ ರಾಜ್ಯಗಳ ಪ್ರಮುಖ ಮುಖಂಡರ ಜೊತೆ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.

 

 

ಪ್ರಭಾವಿ ರಾಜ್ಯಸಭಾ ಸಂಸದರೂ ಈ ಬಾರಿ ಕಣಕ್ಕೆ?: ಈ ಮಹತ್ವದ ಸಭೆಯಲ್ಲಿ 18 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳ ಚುನಾವಣಾ ಕೋರ್ ಕಮಿಟಿ ಅಧಿಕಾರಿಗಳು ಅಭ್ಯರ್ಥಿಗಳ ವಿವರಗಳನ್ನು ಪ್ರಧಾನಿಗೆ ಸಲ್ಲಿಸಿದರು. ನಂತರ ಹೆಸರುಗಳಿಗೆ ಅಂತಿಮ ಅನುಮೋದನೆ ನೀಡಲಾಯಿತು. 18 ರಾಜ್ಯಗಳ 350ಕ್ಕೂ ಹೆಚ್ಚು ಸೀಟುಗಳ ಕುರಿತು ಚರ್ಚೆ ನಡೆಸಿದ್ದಾರೆ. 120 ಕ್ಕೂ ಹೆಚ್ಚು ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಶೀಘ್ರದಲ್ಲೇ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. ರಾಜ್ಯಸಭಾ ಸಂಸದರೂ ಆಗಿರುವ ಕೇಂದ್ರ ಸಚಿವರು ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಸಂಸದರಲ್ಲಿ ಕೇಂದ್ರ ಸಚಿವ ಭೂಪೇಂದರ್ ಯಾದವ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ಸರ್ಬಾನಂದ್ ಸೋನೋವಾಲ್, ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕೇಂದ್ರ ರಾಜ್ಯ ಸಚಿವ ವಿ ಮುರಳೀಧರನ್ ಕಣಕ್ಕಿಳಿಯಲಿದ್ದಾರೆ ಎಂದು ಸಭೆಯಲ್ಲಿ ಚರ್ಚೆ ಮಾಡಲಾಗಿದೆ.

ಬಿಜೆಪಿ ಬಿಡುಗಡೆ ಮಾಡುವ ಪಟ್ಟಿಯಲ್ಲಿ ಮಹಿಳೆಯರು ಸೇರಿದಂತೆ ಹೊಸ ಮುಖಗಳು ಹೆಸರು ಇರಲಿದೆ. ಪಶ್ಚಿಮ ಬಂಗಾಳದ ಅಸನ್ಸೋಲ್ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಬಾಲಿವುಡ್ ದಂತಕಥೆ ಶತ್ರುಘ್ನ ಸಿನ್ಹಾ ಅವರನ್ನು ಎದುರಿಸಲು ಬಿಜೆಪಿ ಭೋಜ್‌ಪುರಿ ಸ್ಟಾರ್ ಪವನ್ ಸಿಂಗ್ ಅವರನ್ನು ಕಣಕ್ಕಿಳಿಸಬಹುದು ಎನ್ನಲಾಗಿದೆ.

ತೆಲಂಗಾಣದ ಮೂವರು ಹಾಲಿ ಸಂಸದರಿಗೆ ಮತ್ತೆ ಟಿಕೆಟ್​: ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ, ಉತ್ತರ ಪ್ರದೇಶದ ಅಭ್ಯರ್ಥಿಗಳ ಹೆಸರನ್ನು ಮೊದಲು ಚರ್ಚಿಸಲಾಯಿತು, ಇದು ಸುಮಾರು 25 ನಿಮಿಷಗಳ ಕಾಲ ನಡೆಯಿತು. ಯುಪಿ ನಂತರ, ಪಶ್ಚಿಮ ಬಂಗಾಳದ ಎಲ್ಲಾ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಚರ್ಚಿಸಲಾಯಿತು. ಇದಾದ ಬಳಿಕ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಛತ್ತೀಸ್‌ಗಢದ ಕುರಿತು ಚರ್ಚೆ ನಡೆಸಲಾಯಿತು. ಮೊದಲ ಪಟ್ಟಿಯಲ್ಲಿ ಬಿಜೆಪಿ ಛತ್ತೀಸ್‌ಗಢದ ನಾಲ್ಕು ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಬಹುದು ಎಂದು ಅಂದಾಜಿಸಲಾಗಿದೆ. ಎಲ್ಲ ಸ್ಥಾನಗಳ ಕುರಿತು ಚರ್ಚೆ ಪೂರ್ಣಗೊಂಡಿದೆ. ಇದಾದ ಬಳಿಕ ಮತ್ತೆ ತೆಲಂಗಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಲಾಯಿತು. ತೆಲಂಗಾಣದ ಮೂವರು ಹಾಲಿ ಸಂಸದರಿಗೆ ಈ ಬಾರಿ ಮತ್ತೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ಸಭೆಯಲ್ಲಿ ಚರ್ಚಿಸಲಾಗಿದೆ.

ಸಭೆಯಲ್ಲಿ ಅಸ್ಸಾಂನ ಅಭ್ಯರ್ಥಿಗಳ ಬಗ್ಗೆಯೂ ಚರ್ಚಿಸಲಾಗಿದೆ. ಈಗಾಗಲೇ ಅಸ್ಸಾಂನ ಬಹುತೇಕ ಲೋಕಸಭಾ ಸ್ಥಾನಗಳನ್ನು ಬಿಜೆಪಿ ನಾಯಕರೇ ತುಂಬಿದ್ದಾರೆ. ಇಲ್ಲಿ 11 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಲಿದ್ದು, ಹಾಗೂ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್​ ದಿಬ್ರುಗಢದಿಂದ ಸ್ಪರ್ಧಿಸಬಹುದು ಹಾಗೂ ರಾಜ್ಯ ಸಚಿವ ರಾಮೇಶ್ವರ್​ ತೇಲಿ ಅವರನ್ನು ರಾಜ್ಯಸಭೆಗೆ ಕಳುಹಿಸಬಹುದು ಎಂದು ಹೇಳಲಾಗುತ್ತಿದೆ.

ಮತ್ತೊಂದು ಸುತ್ತಿನ ಸಭೆ ನಡೆಯಲಿದೆ: ಮುಂದಿನ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಹೆಚ್ಚು ಮಹತ್ವ ಪಡೆದಿದ್ದು, ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಛತ್ತೀಸ್​ಗಢ, ರಾಜಸ್ಥಾನ, ಕೇರಳ, ಗುಜರಾತ್​, ಜಾರ್ಖಂಡ್​ ಹಾಗೂ ಉತ್ತರಾಖಂಡದ ಬಿಜೆಪಿ ನಾಯಕರ ಜೊತೆಗೆ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಜಮ್ಮುವಿನ ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಬಗ್ಗೆಯೂ ಚರ್ಚಿಸಲಾಗಿದ್ದು, ಮುಂದಿನ ಸಭೆಯಲ್ಲಿ ಕಾಶ್ಮೀರದ ಬಗ್ಗೆ ಚರ್ಚೆ ನಡೆಯಲಿದೆ. ದೆಹಲಿಯ ಎರಡರಿಂದ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳ ಬಗ್ಗೆ ಚರ್ಚೆಗಳು ನಡೆದಿವೆ. ಗೋವಾದಲ್ಲಿ ಒಂದು ಸ್ಥಾನಕ್ಕೆ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗಿದ್ದು, ಒಂದು ಸ್ಥಾನಕ್ಕೆ ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಮುಂದೆ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆಯಿದೆ.

ಕಳೆದ ವಾರ, ಗೃಹ ಸಚಿವ ಅಮಿತ್ ಶಾ ಮತ್ತು ಜೆಪಿ ನಡ್ಡಾ ಮತ್ತು ಸಿಎಂ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷಕ್ಕೆ ಸವಾಲಾಗಬಹುದಾದ ಮತ್ತು ಗೆಲ್ಲಲು ಅತ್ಯಂತ ಕಷ್ಟವಾಗಬಹುದಾದ ಕ್ಷೇತ್ರಗಳ ಕುರಿತು ಚರ್ಚಿಸಿದ್ದರು. ಈ ಕ್ಷೇತ್ರಗಳನ್ನು ಗೆಲ್ಲಲು ಯಾವ ರೀತಿ ಕ್ರಮಕೈಗೊಳ್ಳಬೇಕು ಎಂಬುದನ್ನು ಬುಧವಾರ ನಡೆದ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ಈಗ ವಾರಾಣಸಿಯಿಂದ ಸಂಸದರಾಗಿದ್ದಾರೆ. ಅಲ್ಲಿ ಅವರು 2 ಬಾರಿ ಗೆದ್ದಿದ್ದಾರೆ. ಅಮಿತ್ ಶಾ 2019ರ ಚುನಾವಣೆಯಲ್ಲಿ ಲೋಕಸಭೆಗೆ ಗಾಂಧಿನಗರದಿಂದ ಸ್ಪರ್ಧಿಸಿ ಗೆದ್ದಿದ್ದರು.


Spread the love

About Laxminews 24x7

Check Also

ಶ್ರೀರಾಮುಲುಗೂ ವಿಜಯೇಂದ್ರ ಮುಂದುವರಿಯುವುದು ಬೇಕಿಲ್ಲ, ಅದನ್ನು ಚಾಣಾಕ್ಷತೆಯಿಂದ ಹೇಳುತ್ತಾರೆ!

Spread the loveಕೋಲಾರ: ಹಿರಿಯ ಬಿಜೆಪಿ ನಾಯಕ ಬಿ ಶ್ರೀರಾಮುಲು ಅವರಿಗೂ ಬಿವೈ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷನಾಗಿ ಮುಂದುವರಿಯುವುದು ಬೇಕಿಲ್ಲ, ಅದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ