ತೆಲಂಗಾಣದ ಕರೀಂನಗರ ಜಿಲ್ಲೆಯ ವೀಣವಂಕ ಮಂಡಲದಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಬೇಟಿಗಲ್ ಗ್ರಾಮದ ಸುರೇಶ್ ಎಂಬಾತ ಮನೆಯಲ್ಲಿ ಜಗಳ ಮಾಡಿಕೊಂಡು ಜಮೀನಿಗೆ ಬಂದು ಕೀಟನಾಶಕ ಕುಡಿದಿದ್ದ. ಜಮೀನಿನಲ್ಲಿ ಕೆಲಸ ಮಾಡುವವರು ಇದನ್ನು ಗಮನಿಸಿ 100ಕ್ಕೆ ಕರೆ ಮಾಡಿ ಮಾಹಿತಿ ನೀಡಿದರು. ಮಾಹಿತಿ ಸಿಕ್ಕ ಹತ್ತೇ ನಿಮಿಷಕ್ಕೆ ಪೊಲೀಸ್ ಪೇದೆ ಜೈಪಾಲ್ ಮತ್ತು ಗೃಹರಕ್ಷಕ ದಳದ ಕಿನ್ನೇರ ಸಂಪತ್ ಸ್ಥಳಕ್ಕೆ ಬಂದರು. ಯುವಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದನ್ನು ಕಂಡ ಪೊಲೀಸ್ ಕಾನ್ಸ್ಟೇಬಲ್ ಜೈಪಾಲ್, ಸುರೇಶ್‌ನನ್ನು ತಮ್ಮ ಭುಜದ ಮೇಲೆ ಎತ್ತಿಕೊಂಡು ಹೊಲದ ಗದ್ದೆಗಳ ನಡುವೆ ಸುಮಾರು ಎರಡು ಕಿಲೋಮೀಟರ್ ವರೆಗೆ ಓಡಿ ಗ್ರಾಮಕ್ಕೆ ಕರೆತಂದರು.
ಬಳಿಕ ಕೂಡಲೇ ಕುಟುಂಬಸ್ಥರಿಗೆ ಮಾಹಿತಿ ನೀಡಿ ಆಟೋದಲ್ಲಿ ಜಮ್ಮಿಕುಂಟಾ ಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾದರು. ಆದರೆ ಸುರೇಶನನ್ನು ಪರೀಕ್ಷಿಸಿದ ವೈದ್ಯರು ಆತನ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ವಾರಂಗಲ್ ಎಂಜಿಎಂಗೆ ಸ್ಥಳಾಂತರಿಸಿದರು. ವೀಣವಂಕ ಎಸ್ಐ ವಂಶಿಕೃಷ್ಣ ಅವರೊಂದಿಗೆ ಸಾಕಷ್ಟು ಪ್ರಯತ್ನದ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸುರೇಶ್ ಅವರ ಜೀವ ಉಳಿಸಿದ ಕಾನ್ ಸ್ಟೆಬಲ್ ಜೈಪಾಲ್ ಹಾಗೂ ಗೃಹರಕ್ಷಕ ದಳದ ಸಂಪತ್ ಅವರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ. ಪೊಲೀಸ್ ಪೇದೆ ಯುವಕನನ್ನು ರಕ್ಷಿಸುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.