ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು, ಕಾಂಗ್ರೆಸ್‌ನತ್ತ ವಲಸೆ ಹೋಗುತ್ತಾರಾ? ಅಥವಾ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿತ್ತು.
ಈ ನಡುವೆ ಲೋಕಸಭೆಗೆ ನನ್ನ ಸ್ಪರ್ಧೆ ಖಚಿತ ಎಂದು ಹೇಳಿದ್ದ ಸುಮಲತಾ ಅವರು, ಇದೀಗ ದಿಶಾ ಸಭೆಯಲ್ಲಿ ಸಾಧನಾ ಪಟ್ಟಿ ಬಿಡುಗಡೆ ಮಾಡುವ ಮೂಲಕ ವಿದಾಯದ ಭಾಷಣ ಮಾಡಿರುವುದು ಕಂಡುಬಂದಿದೆ.
ಮಂಡ್ಯ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, 5 ವರ್ಷದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಂಸದೆ ಮಾತನಾಡಿದರು. ಕುಡಿಯುವ ನೀರು, ಬಸ್ ನಿಲ್ದಾಣ, ರಸ್ತೆ ಸೇರಿ ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಜೀವ ಬೆದರಿಕೆ ನಡುವೆಯೂ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ.
ಅಕ್ರಮ ಗಣಿಗಾರಿಕೆ ನಿಷೇಧಿಸುವಲ್ಲಿ ಯಶಸ್ವಿಯಾಗಿದ್ದಾನೆ. ನಿರಂತರ ಒತ್ತಡದಿಂದ ಮೈಶುಗರ್, PSSK ಕಾರ್ಖಾನೆ ಆರಂಭ ಮಾಡಲಾಗಿದೆ ಎಂದು ತಿಳಿಸಿದರು.
ಈ ಬಾರಿ ಲೋಕಸಭೆಗೆ ನನ್ನ ಸ್ಪರ್ಧೆ ಖಚಿತ
ಕಳೆದ 5 ವರ್ಷಗಳಿಂದ ದಿಶಾ ಸಭೆಗಳಲ್ಲಿ ಹಲವು ವಿಷಯ ಚರ್ಚೆಯಾಗಿದೆ. ಚರ್ಚೆಯಾದ ವಿಷಯ ಎಷ್ಟರ ಮಟ್ಟಿಗೆ ಜಾರಿಯಾಗಿದೆ ಎನ್ನುವ ಬಗ್ಗೆ ವಿವರ ಕೇಳಬೇಕು. ಭ್ರೂಣ ಹತ್ಯೆ ಬಗ್ಗೆ ನಾನು 4 ವರ್ಷಗಳ ಹಿಂದೆಯೇ ಪ್ರಸ್ತಾಪ ಮಾಡಿದ್ದೆ. ಆದರೆ ಅದರ ವಿರುದ್ಧ ಸರಿಯಾದ ಕ್ರಮ ಆಗಲಿಲ್ಲ. ಭ್ರೂಣ ಹತ್ಯೆ ತಡೆಯಲು ಜಿಲ್ಲಾಡಳಿತ ವಿಫಲವಾಗಿದ್ದು ಬೇಸರ ತರಿಸಿದೆ ಎಂದರು.
ಬೇಬಿಬೆಟ್ಟ ಟ್ರಯಲ್ ಬ್ಲಾಸ್ಟ್ ವಿಚಾರ ಪ್ರತಿಕ್ರಿಯಿಸಿ, ಟ್ರಯಲ್ ಬ್ಲಾಸ್ಟ್‌ಗೆ ಕೋರ್ಟ್ ಆದೇಶ ಇದೆ. ಆದರೆ ವಾಸ್ತವ ಮಾಹಿತಿಯನ್ನು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಟ್ರಯಲ್ ಬ್ಲಾಸ್ಟ್‌ಗೆ ರೈತರ ವಿರೋಧ ಇದೆ. ರೈತರ ಮನವಿಯಲ್ಲಿ ನ್ಯಾಯ ಇದೆ, ನಾನು ಅವರೊಂದಿಗಿದ್ದೇನೆ. ಟ್ರಯಲ್ ಬ್ಲಾಸ್ಟ್ ನಡೆಸಿದರೆ ಅನುಕೂಲಕಕ್ಕಿಂತ ಅನಾನುಕೂಲ ಜಾಸ್ತಿ. ಹೀಗಾಗಿ ಸ್ಟೇ ಆರ್ಡರ್ ತರಲು ರೈತ ಸಂಘ ಮುಂದಾಗಿದೆ. ಜಿಲ್ಲಾಡಳಿತಕ್ಕೆ ಮೇಲ್ಮನವಿ ಸಲ್ಲಿಸುವ ಅವಕಾಶ ಇಲ್ಲ ಎಂದು ತಿಳಿಸಿದರು.
ಜೆಡಿಎಸ್‌ಗೆ ಮಂಡ್ಯ ಕ್ಷೇತ್ರ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಂತೆ ಕಂತೆ ಮೊದಲಿನಿಂದಲೂ ಇದೆ. ಅಧಿಕೃತ ನಿರ್ಧಾರ ಬರುವವರೆಗೂ ಕಾಯೋಣ. ನನಗೆ ವಿಶ್ವಾಸ ಇದೆ, ಮಂಡ್ಯ ಬಿಜೆಪಿಗೆ ಸಿಗಲಿದೆ. ನಾನು ನನ್ನ ಟಿಕೆಟ್‌ಗಾಗಿ ಹೋರಾಟ ಮಾಡುತ್ತಿಲ್ಲ. ನನ್ನ ಹೋರಾಟ ಮಂಡ್ಯಕ್ಕೋಸ್ಕರ. ಮಂಡ್ಯದಲ್ಲಿ ಬಿಜೆಪಿ ಸಂಘಟಿಸಲು ನನ್ನ ಹೋರಾಟ. ನನಗೆ ಟಿಕೆಟ್ ಪಡೆಯುವ ಉದ್ದೇಶ ಇದ್ದಿದ್ದರೆ ಎಲ್ಲಾದರೂ ಅವಕಾಶ ಸಿಗುತ್ತಿತ್ತು. ಜೆಡಿಎಸ್ ನಾಯಕರು ಏನಾದರೂ ಹೇಳಬಹುದು, ಆದರೆ ಅಧಿಕೃತವಾಗಬೇಕು. ಅಂತಿಮ ಘೋಷಣೆ ಆಗುವವರೆಗೂ ಮಾತನಾಡುವುದು ಸೂಕ್ತ ಅಲ್ಲ.
ನನ್ನ ಸ್ಪರ್ಧೆ ಖಚಿತ ಎಂದರು. ಈ ವೇಳೆ ಮಂಡ್ಯ ಕ್ಷೇತ್ರದಿಂದಲಾ ಎಂಬ ಪ್ರಶ್ನೆಗೆ ಉತ್ತರಿಸದೆ ನಕ್ಕು ಹೊರಟರು.
ನನಗೆ ಪ್ರಾಣ ಬೆದಿರಕೆ ಇತ್ತು
ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದ್ದೇನೆ. ಐದು ವರ್ಷದಲ್ಲಿ. ನನಗೆ ನಿರಂತರವಾಗಿ ನನಗ ಒತ್ತಡಗಳು ಬರುತ್ತಿತ್ತು. ಗಣಿಗಾರಿಕೆ ಹೋರಾಟ ನಿಲ್ಲಿಸಲು ಪ್ರಾಣ ಬೆದರಿಕೆ ಸಹ ಹಾಕಲಾಗಿತ್ತು. ಕೆಆರ್‌ಎಸ್ ಉಳಿವಿಗಾಗಿ ಅಕ್ರಮ ವಿರುದ್ಧ ನಾನು ಹೋರಾಟ ಮಾಡಿದ್ದೇನೆ. ಯಾವ ಬೆದರಿಕೆಗೆ ಹೆದರದೆ ಹೋರಾಡಿದ್ದೇನೆ.
ನಮ್ಮ ಹೋರಾಟದ ಫಲವಾಗಿ ಹೈಕೋರ್ಟ್ ಗಣಿಗಾರಿಕೆ ನಿಷೇಧ ಮಾಡಿದೆ ಎಂದರು.
ಜೆಡಿಎಸ್ ಆಯ್ತು, ಇದೀಗ ಕಾಂಗ್ರೆಸ್ಸಿಗರ ಸರದಿ
ಸಂಸದೆ ವಿರುದ್ಧ ಜೆಡಿಎಸ್ ಶಾಸಕರ ಬಳಿಕ ಇದೀಗ ಕೈ ಶಾಸಕರ ಅಸಹಕಾರ ಚಳವಳಿ ಮುಂದುವರಿದಿದೆ. ದಿಶಾ ಸಭೆಗೆ ಜಿಲ್ಲೆಯ ಶಾಸಕರು ನಿರಂತರ ಗೈರಾಗುತ್ತಿದ್ದಾರೆ. ಈ ಹಿಂದೆ ಜೆಡಿಎಸ್ ಶಾಸಕರು ಸಂಸದರ ಬಹುತೇಕ ಸಭೆಗಳಿಗೆ ಗೈರು ಹಾಜರಾಗಿದ್ದರು. ಹಾಜರಾದ ಕೆಲವೇ ಕೆಲವು ಸಭೆಗಳಲ್ಲಿ ಗಣಿಗಾರಿಕೆ, ಅಧಿಕಾರಿಗಳು, ಸಂಸದರ ವಿರುದ್ಧ ಆರೋಪ, ಟೀಕೆಗಳಿಗೆ ಸಭೆಯು ವೇದಿಕೆಯಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದ ಎರಡನೇ ದಿಶಾ ಸಭೆ ಇದಾಗಿದೆ. ಮೊದಲ ಸಭೆಯಲ್ಲಿ ಒಬ್ಬ ಶಾಸಕ ಭಾಗವಹಿಸಿದ್ದರು. ಇಂದಿನ ಸಭೆಗೆ ತಡವಾಗಿ ಮಂಡ್ಯ ಶಾಸಕ ರವಿಕುಮಾರ್ ಆಗಮಿಸಿದ್ದರು. ಇನ್ನುಳಿದಂತೆ ಬರೀ ದಿಶಾ ಸಭೆ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಇದ್ದರು.