ಬೆಂಗಳೂರು, ಫೆ.22- ವಿಧಾನಸಭೆಯಲ್ಲಿ ಬಜೆಟ್ ಮೇಲೆ ಚರ್ಚೆಯ ನಡುವೆ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಮತ್ತೊಮ್ಮೆ ಗಮನ ಸೆಳೆಯುವ ಹೇಳಿಕೆ ನೀಡಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಬಿಜೆಪಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಿದರು. ಬಿಜೆಪಿ ಉಪನಾಯಕ ಅರವಿಂದ ಬೆಲ್ಲದ್ ಬಜೆಟ್ ಮೇಲೆ ಚರ್ಚೆ ಮಾಡುವಾಗ, ಸಿದ್ದರಾಮಯ್ಯ ಅವರ ಸರ್ಕಾರ ಸಾಲ ಮಾಡಿ ತುಪ್ಪ ತಿನ್ನುವಂತಹ ಬಜೆಟ್ ಮಂಡಿಸಿದೆ.
ರೈತರ ಮೇಲಷ್ಟೆ ಅಲ್ಲ ಮುಖ್ಯಮಂತ್ರಿಯವರು ಡಿ.ಕೆ.ಶಿವಕುಮಾರ್ ಮೇಲಿನ ಸಿಟ್ಟಿಗೆ ನೀರಾವರಿ ಇಲಾಖೆಗೆ ಕಡಿಮೆ ಅನುದಾನ ಕಡಿತ ಮಾಡಿದ್ದಾರೆ. ಸಚಿವ ಪ್ರಿಯಾಂಕ ಖರ್ಗೆಗೆ ರಾಜ್ಯದ ಉದಯೋನ್ಮುಖ ನಾಯಕ ಎನ್ನುತ್ತಿದ್ದಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಎಷ್ಟು ಬಾಕಿ ಉಳಿಸಿತ್ತು ಎಂದು ಹೇಳಿ ಎಂದು ಸವಾಲು ಹಾಕಿದರು.
ಸಚಿವ ಪ್ರಿಯಾಂಕ್ ಖರ್ಗೆ ಇದಕ್ಕೆ ಧ್ವನಿಗೂಡಿಸಿದರು. ಮಧ್ಯ ಪ್ರವೇಶಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶೇ.40ರಷ್ಟು ಕಮಿಷನ್ ತನಿಖೆ ಪೂರ್ಣಗೊಳಿಸಿ. ಈ ಸರ್ಕಾರ ಬಂದು ಒಂಬತ್ತು ತಿಂಗಳಾಯಿತು. ಪಿಎಸ್ಐ ಹಗರಣದ್ದು ತನಿಖೆ ಪೂರ್ಣಗೊಂಡಿಲ್ಲ ಎಂದಾಗ, ಪ್ರಿಯಾಂಕ್ ಖರ್ಗೆ, ಬಹಿರಂಗವಾಗಿ ಹೇಳಿಕೆ ನೀಡಿದ್ದ ಯತ್ನಾಳ್ ಅವರು ಪಿಎಸ್ಐ ಹಗರಣದ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ವೀರಪ್ಪ ಆಯೋಗದ ಮುಂದೆ ಹೇಳಿಕೆ ನೀಡಿಲ್ಲ. ನಾವು ನಿಮ್ಮ ಹೇಳಿಕೆ ಕಾಯುತ್ತಿದ್ದೇವೆ. ತನಿಖೆಗೆ ನಿಮ್ಮ ಸಹಕಾರ ಬೇಕಿದೆ ಎಂದು ಮನವಿ ಮಾಡಿದರು.