ಕರ್ನಾಟಕ ಗಡಿಭಾಗದ ಗ್ರಾಮಗಳಲ್ಲಿ ತನ್ನ ಹಕ್ಕು ಸಾಧನೆಗೆ ಒಂದಿಲ್ಲೊಂದು ಕುತಂತ್ರ ಹೂಡುತ್ತಿರುವ ಮಹಾರಾಷ್ಟ್ರ ಸರ್ಕಾರ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಬೆಳಗಾವಿ ನಗರದಿಂದ ಕೇವಲ 15 ಕಿಮೀ ದೂರದಲ್ಲಿರುವ ಶಿನೋಳ್ಳಿ ಗ್ರಾಮದಲ್ಲಿ ತಾಲೂಕುಮಟ್ಟದ ಸರ್ಕಾರಿ ಕಚೇರಿ ಆರಂಭಿಸಲು ಭರದ ಸಿದ್ಧತೆ ನಡೆಸಿದೆ.
ಈ ಕಚೇರಿಗೆ ತಹಸೀಲ್ದಾರ್ ಮಟ್ಟದ ಅಧಿಕಾರಿಗಳನ್ನು ನೇಮಿಸಿ ಆ ಮೂಲಕ ತನ್ನ ಕಾರ್ಯಚಟುವಟಿಕೆಗಳನ್ನು ನಡೆಸಲು ಹೊಂಚು ಹಾಕಿದೆ. ಅಲ್ಲದೆ ಶಿನೋಳ್ಳಿಯಲ್ಲಿ ಮರಾಠಿ ಭಾಷಿಕರ ಬೃಹತ್ ಸಮಾವೇಶ ನಡೆಸಲು ಯೋಜನೆ ರೂಪಿಸಿದ್ದು, ಕೊಲ್ಲಾಪುರ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಲಿದ್ದಾರೆಂದು ಮಾಹಿತಿಯೂ ಲಭ್ಯವಾಗಿದೆ.
ಮರಾಠಿ ಭಾಷಿಕರ ಸಮಸ್ಯೆಗಳ ಕುರಿತು ಕೊಲ್ಲಾಪುರ ಇಲ್ಲವೇ ಮುಂಬೈಗೆ ಹೋಗಿ ಮನವಿ ಸಲ್ಲಿಸಲು ಆಗುವುದಿಲ್ಲ. ಹೀಗಾಗಿ ಶಿನೋಳ್ಳಿಯಲ್ಲಿ ತಾಲೂಕುಮಟ್ಟದ ಕಚೇರಿ ಆರಂಭಿಸಿ ತಹಸೀಲ್ದಾರ್ ಮಟ್ಟದ ಅಧಿಕಾರಿ ನೇಮಿಸಲು ಮನವಿ ಸಲ್ಲಿಸಿದ್ದೇವೆ. ಇದಕ್ಕೆ ಕೊಲ್ಲಾಪುರ ಜಿಲ್ಲಾಧಿಕಾರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರ ಕಚೇರಿ ಆರಂಭಗೊಳ್ಳಲಿದೆ ಎಂದು ಎಂಇಎಸ್ ಮುಖಂಡರು ತಿಳಿಸಿದ್ದಾರೆ. ಅಸ್ತಿತ್ವ ಕಳೆದುಕೊಂಡಿರುವ ಎಂಇಎಸ್ ಮುಖಂಡರು ರಾಜಕೀಯ ಅಸ್ತಿತ್ವಕ್ಕಾಗಿ ಇದೇ ವಿಷಯ ಬಂಡವಾಳ ಮಾಡಿಕೊಂಡು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಮಹಾತ್ಮ ಜ್ಯೋತಿರಾವ್ ಫುಲೆ ಜನಾರೋಗ್ಯ ಯೋಜನೆ ಅನುಷ್ಠಾನಕ್ಕಾಗಿಯೇ ತಹಸೀಲ್ದಾರ್ ಮಟ್ಟದ ಅಧಿಕಾರಿಗಳನ್ನು ಮಹಾಸರ್ಕಾರ ನಿಯೋಜಿಸಿದೆ. ಕರ್ನಾಟಕದ ಐದು ಜಿಲ್ಲೆಗಳಲ್ಲಿ 865ಕ್ಕೂ ಅಧಿಕ ಹಳ್ಳಿಗಳ ಮರಾಠಿಗರು ಹಾಗೂ ಇತರ ಭಾಷಿಕರಿಗೂ ಈ ಯೋಜನೆ ವಿಸ್ತರಿಸಲು ಹೊರಟಿದೆ. ಇದಕ್ಕೆ ಕರ್ನಾಟಕ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿ ರಾಜ್ಯದಲ್ಲಿ ತೆರೆದಿದ್ದ ಯೋಜನೆಯ ನೋಂದಣಿ ಕೇಂದ್ರಗಳನ್ನು ಬಂದ್ ಮಾಡಿದೆ. ಅಷ್ಟಾದರೂ ಸುಮ್ಮನಿರದೆ ಮೊಂಡುತನ ಪ್ರದರ್ಶಿಸುತ್ತಿದೆ.