ಬೆಳಗಾವಿ, (ಫೆಬ್ರವರಿ 15): ಬೆಳಗಾವಿ ಮಹಾನಗರ ಪಾಲಿಕೆಯನ್ನು ಬಿಜೆಪಿ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಪೌರ ಕಾರ್ಮಿಕ ಮಹಿಳೆ, ಕನ್ನಡತಿ ಸವಿತಾ ಕಾಂಬಳೆ ಅವರಿಗೆ ಮೇಯರ್ ಪಟ್ಟ ಒಲಿದುಬಂದಿದೆ. ಉಪಮೇಯರ್ ಆಗಿ ಮರಾಠಿಯ ಆನಂದ್ ಚವ್ಹಾಣ್ ಆಯ್ಕೆಯಾಗಿದ್ದಾರೆ. ಈ ಮೂಲಕ ಬಿಜೆಪಿಯಿಂದ ಕನ್ನಡ ಹಾಗೂ ಮರಾಠಾ ಸಮುದಾಯಗಳ ಓಲೈಕೆ ಮಾಡಲಾಗಿದೆ. ಬಿಜೆಪಿಯ ಆನಂದ್ ಚವ್ಹಾಣ್ 39 ಮತ ಹಾಗೂ ಕಾಂಗ್ರೆಸ್‌ನ ಜ್ಯೋತಿ ಕಡೋಲ್ಕರ್ 20 ಮತಗಳು ಪಡೆದುಕೊಂಡಿದ್ದಾರೆ. ಇದರೊಂದಿಗೆ ಆನಂದ್ ಗೆಲುವುಸಾಧಿಸಿದ್ದಾರೆ.
ಪೌರಕಾರ್ಮಿಕರಾಗಿದ್ದ ಸವಿತಾ ಕಾಂಬಳೆ
ಬೆಳಗಾವಿ ಮೇಯರ್ ಆಗಿ ಆಯ್ಕೆಯಾಗಿರುವ ಸವಿತಾ ಕಾಂಬಳೆ ಅವರು ಕೆಲ ವರ್ಷಗಳ ಹಿಂದೆ ಇದೇ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡಿದ್ದಾರೆ. ನಂತರ ಹೆಲ್ಮೆಟ್ ಕಂಪನಿಯೊಂದರಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು. ತದನಂತರ ಅವರು ಊದುಬತ್ತಿ ತಯಾರಿಕಾ ಘಟಕ ಶುರು ಮಾಡಿದ್ದರು. ಆದ್ರೆ, 2021ರಲ್ಲಿ ಅವರಿಗೆ ಒಲಿದು ಬಂದ ಅವಕಾಶ ಬಳಸಿಕೊಂಡು ಬಿಜೆಪಿಯಿಂದ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದೀಗ ಪೌರಕಾರ್ಮಿಕ ಆಗಿ ಕೆಲಸ ಮಾಡಿದ್ದ ಸವಿತಾ ಕಾಂಬಳೆ ಬೆಳಗಾವಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.