ಬೆಂಗಳೂರು : ಬುಧವಾರ ಬಜೆಟ್ ಅಧಿವೇಶನದ (Budget Session) ಮೂರನೇ ದಿನ ಪ್ರತಿಪಕ್ಷ ನಾಯಕ ಆರ್. ಅಶೋಕ್ (R Ashok) ಭಾಷಣದ ವೇಳೆ ನಡೆದ ರಾಮಮಂದಿರದ ಪ್ರಸ್ತಾಪ ಕಾಂಗ್ರೆಸ್ (Congress) ಮತ್ತು ಬಿಜೆಪಿ(BJP) ನಡುವಿನ ವಾಕ್ಸಮರಕ್ಕೆ ಕಾರಣವಾಯಿತು. ಎರಡೂ ಪಕ್ಷಗಳ ಸದಸ್ಯರು ತಮ್ಮ ಹತೋಟಿಯನ್ನು ಕಳೆದುಕೊಂಡು ಕೂಗಾಟದಲ್ಲಿ ತೊಡಗಿದ್ದ ಕಾರಣ ಸುಮಾರು ಒಂದು ತಾಸುಗಳ ಕಾಲ ಮಾರುಕಟ್ಟೆಯ ವಾತಾವರಣ ಉಂಟಾಗಿತ್ತು.
ರಾಜ್ಯಪಾಲರ ಭಾ಼ಷಣದ ಮೇಲಿನ ವಂದನಾ ನಿರ್ಣಯವನ್ನು ಅರ್ಪಿಸುವ ವೇಳೆ ಪ್ರಾಸ್ತಾವಿಕವಾಗಿ ಅಯೋಧ್ಯೆ ರಾಮಮಂದಿರ ನೀಡಿದ್ದ ಆಹ್ವಾನವನ್ನೂ ಕಾಂಗ್ರೆಸ್ ತಿರಸ್ಕರಿಸಿತ್ತು ಎಂದರು. ಇದಕ್ಕೆ ಕೆರಳಿದ ಸಚಿವ ಪ್ರಿಯಾಂಕ್ ಖರ್ಗೆ ರಾಷ್ಟ್ರಪತಿಯವರಿಗೇ ನೀವು ಆಹ್ವಾನ ನೀಡಿರಲಿಲ್ಲ ಎಂದು ಟೀಕಿಸಿದರು.
ಪ್ರತ್ಯುತ್ತರ ನೀಡಿದ ಆರ್. ಅಶೋಕ್ ರಾಷ್ಟ್ರಪತಿಗಳಿಗೆ ಆಹ್ವಾನ ನೀಡಲಿಲ್ಲ ಎಂಬುದೆ ನೀವು ಬರದೆ ಇರುವುದಕ್ಕೆ ಕಾರಣವೇ ಎಂದಾಗ, ಅವರೊಬ್ಬರು ದಲಿತ ಮಹಿಳೆ ಎಂದು ನೀವು ಆಹ್ವಾನ ನೀಡಿಲ್ಲ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು. ಇದಕ್ಕೆ ಸಿಡಿದೆದ್ದ ಬಿಜೆಪಿ ನಾಯಕರಾದ ಸುನಿಲ್ ಕುಮಾರ್ ಕಾರ್ಕಳ , ಪ್ರಭು ಚವ್ಹಾಣ್ ಮುಂತಾದವರು ಅಯೋಧ್ಯೆ ಮಂದಿರ ನಿರ್ಮಿಸುವುದು ನಮ್ಮ ಬದ್ದತೆಯಾಗಿತ್ತು. ಅದಕ್ಕೆ ನೀವು ಇಲ್ಲದ ನೆಪ ಹೂಡಿ ವಿರೋಧಿಸುತ್ತಿದ್ದೀರಾ. ರಾಮ ಲಕ್ಷ್ಮಣರ ಅಸ್ತಿತ್ವವನ್ನೇ ಕಾಂಗ್ರೆಸ್ ಪಕ್ಷವು ಪ್ರಶ್ನೆ ಮಾಡಿತ್ತು ಎಂದರು.
ಬಿಜೆಪಿ ನಾಯಕರೆಲ್ಲಾ ಜೈಶ್ರೀರಾಮ್ ಎಂದು ಘೋಷಣೆ ಕೂಗಲಾರಂಭಿಸಿದರು. ಪ್ರಿಯಾಂಕ್ ಖರ್ಗೆ ಇದಕ್ಕೆ ಪ್ರತಿಕ್ರಿಯಿಸಿ ಜೈ ಸಂವಿಧಾನ್, ಜೈಕರ್ನಾಟಕ ಎಂಬುದು ನಿಮ್ಮ ಬಾಯಲ್ಲಿ ಬರುವುದಿಲ್ಲ. ನಾಲ್ಕು ಮಂದಿ ಶಂಕರಾಚಾರ್ಯರು ಅಯೋಧ್ಯೆಯ ಬಗ್ಗೆ ಏನು ಹೇಳಿದ್ದಾರೆಂದು ಕೇಳಿ ಮೊದಲು ಅದಕ್ಕೆ ಉತ್ತರಿಸಿ ಎಂದು ಕಿಡಿಕಾರಿದರು.