ಬಾಗಲಕೋಟೆ, : ನಿಗಮ ಮಂಡಳಿ ಅಧಿಕಾರ ವಹಿಸಿಕೊಳ್ಳದೆ ಕಾಂಗ್ರೆಸ್ ಶಾಸಕ ಜೆ.ಟಿ.ಪಾಟೀಲ್ (JT Patil) ಅವರು ಹಟ್ಟಿ ಚಿನ್ನದ ಗಣಿ ನಿಗಮ (Hutti Gold Mines Corporation) ನೀಡಿದ್ದಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ. ನಿಗಮ ಮಂಡಳಿ ಸ್ಥಾನಕ್ಕಾಗಿ ನಾನು ಯಾರ ಮನೆ ಬಾಗಿಲು ತಟ್ಟಿಲ್ಲ. ನಾನಿನ್ನೂ ಅಧಿಕಾರ ಸ್ವೀಕಾರ ಮಾಡಿಲ್ಲ. ಮುಖ್ಯಮಂತ್ರಿಸಿದ್ದರಾಮಯ್ಯ(Siddaramaiah) ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿಯಾಗಬೇಕಿದೆ. ಇಬ್ಬರು ನಾಯಕರನ್ನು ಭೇಟಿಯಾಗಿ ನನ್ನ ಅನಿಸಿಕೆ ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಮೊನ್ನೆ ದೆಹಲಿಯಲ್ಲಿ ಭೇಟಿಯಾಗಿದ್ದ ವೇಳೆ ನಿಮ್ಮ ಜೊತೆ ಸ್ವಲ್ಪ ಮಾತಾಡೋದು ಇದೆ, ನಂತರ ನಾನು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ನಾಯಕರಿಗೆ ಹೇಳಿದ್ದೇನೆ. ಅವರ ಜೊತೆ ಚರ್ಚೆ ಮಾಡಿದ ಮೇಲೆ ನಾನು ಅಧಿಕಾರ ಸ್ವೀಕಾರ ಮಾಡಬಹುದು. ಒಪ್ಪಿಗೆ ಇದಿಯೋ ಇಲ್ಲವೋ ಅನ್ನೋ ಪ್ರಶ್ನೆ ಇಲ್ಲ. ನಮ್ಮ ಮನಸ್ಸಿನಲ್ಲಿ ಕೆಲವು ವಿಷಯಗಳು ಇರುತ್ತವೆ. ಕೆಲವು ವಿಷಯಗಳನ್ನು ಚರ್ಚೆ ಮಾಡಬೇಕಾಗುತ್ತದೆ ಎಂದರು.
ಈಗ ಅಸಮಾಧಾನ ಇದೆಯೇ ಅನ್ನೋದಕ್ಕೆ ಏನಿದೆ, ಸಂಪುರ ರಚನೆ ಆಗಿ ಹೋಗಿದೆ. ಬೋರ್ಡ್ ಕಾರ್ಪೊರೇಷನ್ ಸ್ಥಾನ ಹಂಚಿಕೆ ಮಾಡಿದ್ದಾರೆ. ಬೇಕಾದರೆ ಅಧಿಕಾರ ತೆಗೆದುಕೊಳ್ಳಬಹುದು, ಬೇಡವೆಂದರೆ ಬಿಡಬೇಕು. ನಿರೀಕ್ಷೆ ಇದರಲ್ಲಿ ಏನಿದೆ. ನಿಮಗೆ ಕೊಟ್ಟಿದ್ದನ್ನ ನನಗೆ ಕೊಡು ಅಂದರೆ ಕೊಡುತ್ತಾರಾ? ಕೇಳುವುದು ನಮ್ಮ ಧರ್ಮ ಅಲ್ಲ. ಕೆಲವರು ಕೇಳಬಹುದು. ಆದರೆ ನಾನಂತೂ ಯಾರ ಮನೆಗೂ ಹೋಗಿ ಬಾಗಿಲು ತಟ್ಟಿಲ್ಲ ಎಂದರು.