ಕುಟುಂಬದ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ 42 ಸಿಮ್‌ಕಾರ್ಡ್‌ಗಳನ್ನು ಸಂಗ್ರಹಿಸಿಕೊಂಡು ಬೆಂಗಳೂರು ಕಡೆ ಪ್ರಯಾಣಿಸುತ್ತಿದ್ದ ಐವರನ್ನು ಧರ್ಮಸ್ಥಳ ಪೊಲೀಸರು ರವಿವಾರ ಪತ್ತೆಹಚ್ಚಿದ್ದಾರೆ.
ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಓರ್ವ ಅಪ್ರಾಪ್ತ ವಯಸ್ಕನಾಗಿದ್ದಾನೆ.
ಇಷ್ಟು ಸಂಖ್ಯೆಯ ಸಿಮ್ ಪಡೆದುಕೊಂಡಿರುವುದರ ಹಿಂದೆ ದುರುದ್ದೇಶವಿದೆಯೇ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.
ವೃತ್ತಿಯಲ್ಲಿ ದುಬಾೖಯಲ್ಲಿ ಟ್ರೇಡಿಂಗ್ ಕೆಲಸ ಮಾಡುತ್ತಿದ್ದ ಬಿಕಾಂ ಪದವೀಧರ ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಅಕ್ಬರ್ ಆಲಿ (24), ಬೆಳ್ತಂಗಡಿಯ ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ಮನ್ ಆಗಿದ್ದ ಬೆಳ್ತಂಗಡಿ ಸಂಜಯನಗರದ ಮಹಮ್ಮದ್ ಮುಸ್ತಾಫಾ (22), ಬೆಂಗಳೂರಿನ ಎಂಪೈರ್ ರೆಸ್ಟೋರೆಂಟ್ ಕಂಪೆನಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ
ಮುಂಡಾಜೆಯ ಸೋಮಂತ್ತಡ್ಕ ನಿವಾಸಿ, ಪ್ರಸಕ್ತ ನೆರಿಯ ಗುಂಪುಕಲ್ಲುವಿನಲ್ಲಿ ವಾಸವಿದ್ದ ರಮೀಝ್ (20), ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ತಾಲೂಕುಗಳಲ್ಲಿ ಚಪ್ಪಲ್ ಲೈನ್ ಸೇಲ್ ಮಾಡುತ್ತಿದ್ದ ಪಡಂಗಡಿ ಗ್ರಾಮದ ಬದ್ಯಾರು ನಿವಾಸಿ ಮಹಮ್ಮದ್ ಸಾದಿಕ್ (27), ಉಜಿರೆ ಟಿಬಿ ಕ್ರಾಸ್ ಬಳಿ ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ವಯಸ್ಕ (17)ನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.