ಬೆಂಗಳೂರು,ಫೆ.3- ಮುಜರಾಯಿ ದೇವಸ್ಥಾನದಲ್ಲಿ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ನೀಡದೆ ಅಸ್ಪೃಶ್ಯತೆ ಹಾಗೂ ತಾರತಮ್ಯ ಮಾಡಲಾಯಿತು ಎಂದು ಚಿತ್ರದುರ್ಗದ ಕನಕಪೀಠದ ಈಶ್ವರಾನಂದ ಪುರಿ ಸ್ವಾಮೀಜಿ ನೀಡಿರುವ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಶ್ರೀಗಳು ನಿನ್ನೆ ನೀಡಿದ ಹೇಳಿಕೆಗೆ ದೇವಸ್ಥಾನದ ಅರ್ಚಕರು ಸ್ಪಷ್ಟನೆ ನೀಡಿ ನಮ್ಮಲ್ಲಿ ಆ ರೀತಿ ಯಾವುದೇ ತಾರತಮ್ಯವಿಲ್ಲ.
ಪ್ರತಿ ವರ್ಷ ವೈಕುಂಠ ಏಕಾದಶಿ ದರ್ಶನಕ್ಕೆ ನಾವೇ ಶ್ರೀಗಳನ್ನು ಆಹ್ವಾನ ಮಾಡುತ್ತೇವೆ. ದೇವಸ್ಥಾನದಿಂದ ಸಕಲ ಗೌರವ, ಸನ್ಮಾನಗಳನ್ನು ಮಾಡಿ ವಿನಯಪೂರಕವಾಗಿ ಕಳುಹಿಸಿಕೊಡುತ್ತೇವೆ. ಆದರೂ ಸ್ವಾಮೀಜಿ ಯಾವ ಕಾರಣಕ್ಕೆ ವಿವಾದಿತ ಹೇಳಿಕೆ ನೀಡಿದರು ಎಂದಿದ್ದಾರೆ.
ಅದರ ನಂತರ ಮತ್ತೆ ಇಂದು ಬೆಳಿಗ್ಗೆ ಈಶ್ವರಾನಂದ ಪುರಿ ಸ್ವಾಮೀಜಿಗಳು ತಮ್ಮ ಹೇಳಿಕೆಯನ್ನು ಪುನರ್ ಉಚ್ಛರಿಸಿದ್ದಾರೆ. ದೇವಸ್ಥಾನದಲ್ಲಿ ಅಸ್ಪೃಶ್ಯತೆ, ತಾರತಮ್ಯ ನಡೆದಿದ್ದು ನಿಜ. ಕೆಲ ವರ್ಷಗಳ ಹಿಂದೆ ಕುರುಬ ಸಮುದಾಯದ ಸ್ವಾಮೀಜಿಯೊಬ್ಬರು ದೇವಸ್ಥಾನಕ್ಕೆ ಭೇಟಿ ನೀಡಿ ಗರ್ಭಗುಡಿ ಪ್ರವೇಶಿಸಿದ ಹಿನ್ನೆಲೆಯಲ್ಲಿ ಇಡೀ ದೇವಸ್ಥಾನವನ್ನೇ ಸ್ವಚ್ಚಗೊಳಿಸಲಾಗಿತ್ತು ಎಂಬ ಮಾಹಿತಿ ತಿಳಿದು ತಮ್ಮ ಮನಸಿಗೆ ನೋವಾಯಿತು. ತಮಗೂ ಈ ಕಹಿ ಅನುಭವ ಆಗಿದೆ ಎಂದಿದ್ದಾರೆ.