ಬೆಳಗಾವಿ: ಇಲ್ಲಿನ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬಿಮ್ಸ್) ಜಿಲ್ಲಾಸ್ಪತ್ರೆಯಲ್ಲಿ ‘ಅಮೃತಧಾರೆ’ ಎದೆಹಾಲು ಸಂಗ್ರಹ ಬ್ಯಾಂಕ್ ಉದ್ಘಾಟನೆಯಾಗಿ ಎರಡು ತಿಂಗಳಾದರೂ ಕಾರ್ಯಾರಂಭ ಮಾಡಿಲ್ಲ.
ಎದೆಹಾಲಿನ ಕೊರತೆಯಿಂದ ಬಳಲುತ್ತಿರುವ ಶಿಶುಗಳಿಗೆ ನೆರವಾಗಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬೆಳಗಾವಿ, ಕಲಬುರಗಿ, ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಎದೆಹಾಲು ಸಂಗ್ರಹ ಬ್ಯಾಂಕ್ ಆರಂಭಿಸಲು ಮುಂದಾಗಿತ್ತು.
ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿಗೆ ಬಂದಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ 2023ರ ಡಿಸೆಂಬರ್ 13ರಂದು ಉದ್ಘಾಟಿಸಿದ್ದರು.
‘ಬೆಳಗಾವಿಯೊಂದಿಗೆ ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಸಿಮ್ಸ್) ಎದೆಹಾಲು ಸಂಗ್ರಹ ಬ್ಯಾಂಕ್ ಕಾರ್ಯಾರಂಭಕ್ಕೆ ಸಿದ್ಧತೆ ನಡೆದಿದೆ. ಕಲಬುರಗಿಯಲ್ಲಿ ಶೀಘ್ರವೇ ಸ್ಥಳ ಅಂತಿಮಗೊಳ್ಳಲಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (ಮಕ್ಕಳ ಆರೋಗ್ಯ) ಬೆಂಗಳೂರು ಉಪನಿರ್ದೇಶಕ ಡಾ.ಬಸವರಾಜ ದಬಾಡಿ ತಿಳಿಸಿದರು.
ಶೇ 20ರಷ್ಟು ಮಕ್ಕಳಿಗೆ ಕೊರತೆ:
‘ಜಿಲ್ಲಾಸ್ಪತ್ರೆಯಲ್ಲಿ ತಿಂಗಳಿಗೆ 650ರಿಂದ 700 ಹೆರಿಗೆಯಾಗುತ್ತವೆ. ಈ ಪೈಕಿ ಶೇ 20 ಶಿಶುಗಳಿಗೆ ಎದೆಹಾಲಿನ ಕೊರತೆ ಆಗುತ್ತದೆ. ಅವುಗಳಿಗೆ ಪುಡಿ ಬಳಸಿ ಹಾಲು ಕೊಡುತ್ತೇವೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಠ್ಠಲ ಶಿಂಧೆ ತಿಳಿಸಿದರು.