ಕೊಪ್ಪಳ: ಇಲ್ಲಿನ ಗವಿಮಠದ ಜಾತ್ರೆಯ ಮಹಾದಾಸೋಹದಲ್ಲಿ ಎರಡನೇ ದಿನವಾದ ಭಾನುವಾರ ಉತ್ತರ ಕರ್ನಾಟಕದ ಪ್ರಸಿದ್ಧ ಖಾದ್ಯ ಮಿರ್ಚಿ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಮಿರ್ಚಿ ತಯಾರಿಕೆಗೆ ಕೊಪ್ಪಳದ ಸಮಾನ ಮನಸ್ಕ ಸ್ನೇಹಿತರು ಮಿರ್ಚಿ ಸೇವಾ ಬಳಗ ಆರಂಭಿಸಿದ್ದು ಈ ಬಾರಿ ಸೇವಾ ಕಾರ್ಯದಲ್ಲಿ ಗಣ್ಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ದಾಸೋಹಕ್ಕಾಗಿ ಬರುವ ಲಕ್ಷಾಂತರ ಭಕ್ತರಿಗೆ ಮಿರ್ಚಿ ಉಣಬಡಿಸಿದರು. ಬೆಳಗಿನ ಜಾವವೇ ಆರಂಭವಾಗಿದ್ದು 400 ಬಾಣಸಿಗರು ಈ ಕಾರ್ಯದಲ್ಲಿ ಭಾಗಿಯಸದರು. ಮಿರ್ಚಿ ರುಚಿಗೆ ಮನಸೋತ ಭಕ್ತರು ನಾಲ್ಕೈದು ಮಿರ್ಚಿಗಳನ್ನು ತಿನ್ನುವ ಜೊತೆಗೆ ಲಕ್ಷಾಂತರ ಪ್ರಮಾಣದಲ್ಲಿ ಹೇಗೆ ತಯಾರಿಸಲಾಗುತ್ತದೆ ಎನ್ನುವ ಕುತೂಹಲದಿಂದಲೂ ಜನ ಮಿರ್ಚಿ ತಯಾರಿಸುವ ದಾಸೋಹ ಮನೆಗೆ ಭೇಟಿ ನೀಡಿ ಕುತೂಹಲ ತಣಿಸಿಕೊಳ್ಳುತ್ತಿದ್ದಾರೆ.

ಒಟ್ಟು ನಾಲ್ಕೂವರೆ ಲಕ್ಷ ಮಿರ್ಚಿ ತಯಾರಿಕೆ ಆಗಲಿದ್ದು ಇದಕ್ಕಾಗಿ 25 ಕ್ವಿಂಟಲ್ ಹಸೆ ಹಿಟ್ಟು, 10 ಬ್ಯಾರಲ್ ಅಡುಗೆ ಎಣ್ಣೆ, 20 ಕ್ವಿಂಟಲ್ ಮೆಣಸಿನಕಾಯಿ, 60 ಕೆ.ಜಿ. ಅಜಿವಾನ, 60 ಕೆ.ಜಿ. ಉಪ್ಪು, ಸೊಡಾಪುಡಿ ಬಳಕೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದರು.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಿರ್ಚಿ ಮಾಡಲು ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ವಿಜಯನಗರ ಜಿಲ್ಲೆಗಳಿಂದ ಜನರೇ ಬಾಣಸಿಗರಾಗಿ ಬಂದು ಯಾವುದೇ ಫಲಾಪೇಕ್ಷೆಯಿಲ್ಲದೆ ಮಿರ್ಚಿ ಹಾಕಿದರು. ಅಜ್ಜನ ದೊಡ್ಡ ಜಾತ್ರೆಗೆ ನಮ್ಮದು ಸಣ್ಣ ಸೇವೆ ಇರಲಿ ಎಂದು ಮಿರ್ಚಿ ತಯಾರಿಸುವ ಕೆಲಸ ಮಾಡುತ್ತಾರೆ.
‘ಅಜ್ಜನ ಜಾತ್ರೆಯಲ್ಲಿ ಮಿರ್ಚಿ ಹಾಕುವುದನ್ನು ಸೇವೆ ಎಂದುಕೊಂಡು ಎಲ್ಲರೂ ಭಾಗಿಯಾಗುತ್ತಾರೆ. ಸೇವೆ ಮಾಡಲು ಭಕ್ತರು ಸರತಿಯಲ್ಲಿ ಕಾಯುತ್ತಾರೆ. ಹೀಗಾಗಿ ಪ್ರತಿವರ್ಷ ಮಿರ್ಚಿ ನೀಡುವ ಕಾರ್ಯ ಯಶಸ್ವಿಯಾಗುತ್ತಿದೆ’ ಎಂದು ಬಳಗದ ಪ್ರಮುಖ ರಮೇಶ ತುಪ್ಪದ ತಿಳಿಸಿದರು.
Laxmi News 24×7