ಬೆಂಗಳೂರು: ಅಯೋಧ್ಯೆಯ ರಾಮಮಂದಿರದಲ್ಲಿ ಇದೇ 22ರಂದು (ಸೋಮವಾರ) ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ನಡೆಯುವ ಅಂಗವಾಗಿ ನಗರದ ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
‘ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾಪನಾ ಪ್ರಯುಕ್ತ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಶ್ರೀರಾಮ ಉತ್ಸವ, ಲಕ್ಷ ದೀಪೋತ್ಸವ, ಭಜನೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
‘ಪದ್ಮನಾಭನಗರದ ಕಾರ್ಮೆಲ್ ಸ್ಕೂಲ್ ಮೈದಾನದಲ್ಲಿ ಸೋಮವಾರ ಸಂಜೆ 5ಕ್ಕೆ ಗಾಯಕರಾದ ವಿಜಯ್ ಪ್ರಕಾಶ್, ಅರುಣ್ ಡಿ. ರಾವ್ ಅವರಿಂದ ಶ್ರೀರಾಮ ಸಂಕೀರ್ತನೆ, ಭಜನೆ ನಡೆಸಿಕೊಡಲಿದ್ದಾರೆ. 500ಕ್ಕೂ ಹೆಚ್ಚು ಮಕ್ಕಳು, ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತನ ವೇಷಧರಿಸಿ ನೃತ್ಯ ಮಾಡಲಿದ್ದಾರೆ’ ಎಂದರು.
ಮಾಲ್‌ನಲ್ಲಿ ನೇರ ಪ್ರಸಾರ
ಅಯೋಧ್ಯೆಯಲ್ಲಿ ಸೋಮವಾರ ಮಧ್ಯಾಹ್ನ 12.20ಕ್ಕೆ ಜರಗುವ ‘ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ’ದ ನೇರ ಪ್ರಸಾರವನ್ನು ರಾಜಾಜಿನಗರದ ಬ್ರಿಗೇಡ್ ಗೇಟ್‌ವೇನಲ್ಲಿರುವ ಒರಾಯನ್ ಮಾಲ್‌ನಲ್ಲಿ ಆಯೋಜಿಸಲಾಗಿದೆ.
ಗೋವಿಂದರಾಜನಗರದ ಮಾರುತಿ ಮಂದಿರದಲ್ಲಿ ಬೆಳಿಗ್ಗೆ 9ರಿಂದ ‘ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ’ದ ನೇರ ಪ್ರಸಾರ ನಡೆಯಲಿದ್ದು, ಪುಷ್ಪಾಲಂಕಾರ, ಶ್ರೀರಾಮ ಭಜನೆ, ಪ್ರಸಾದ ವಿನಿಯೋಗ ಹಾಗೂ ದೇವಸ್ಥಾನಕ್ಕೆ ದೀಪಾಲಂಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನಾಟಕ ಪ್ರದರ್ಶನ
ಎ.ವಿ. ಸತ್ಯನಾರಾಯಣ ಅವರು ಸಂಯೋಜಿಸಿ ನಿರ್ದೇಶಿಸಿರುವ ‘ರಾಮಾಯಣ’ ನೃತ್ಯ ನಾಟಕದ ಪ್ರದರ್ಶನವನ್ನು ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಮಧ್ಯಾಹ್ನ 3ಕ್ಕೆ ಆಯೋಜಿಸಲಾಗಿದೆ.
ಸೀತಾ ಕಲ್ಯಾಣೋತ್ಸವ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ಮಹಾಲಕ್ಷ್ಮೀ ಎಜುಕೇಷನಲ್ ಟ್ರಸ್ಟ್ ಸಹಯೋಗದಲ್ಲಿ ಇದೇ 21 ಹಾಗೂ 22ಕ್ಕೆ ತ್ರಯೋದಶ ಲಕ್ಷ ಶ್ರೀರಾಮತಾರಕ ಮಹಾಯಾಗ, ಸೀತಾ ಕಲ್ಯಾಣೋತ್ಸವವನ್ನು ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ರಾಣಿ ಅಬ್ಬಕ್ಕ ಆಟದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
21ಕ್ಕೆ ಬೆಳಿಗ್ಗೆ 7ರಿಂದ ಶ್ರೀರಾಮ ಸುಪ್ರಭಾತ್, ಗೋಪೂಜೆ, ಯಾಗ ಶಾಲಾ ಪ್ರವೇಶ, ಗಂಗಾಪೂಜೆ, ಗಣಪತಿ ಪೂಜೆ, ಶ್ರೀರಾಮಾಯಣ ಪಾರಾಯಣ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಂಜೆ 4ರಿಂದ ಸೀತಾ ಕಲ್ಯಾಣೋತ್ಸವ ನಡೆಯಲಿದೆ. 22ರಂದು ಬೆಳಿಗ್ಗೆ 7.30ಕ್ಕೆ ಶ್ರೀರಾಮತಾರಕ ಮಹಾಯಾಗ ಕಲಶಾಭಿಷೇಕ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಪೂರ್ಣಾಹುತಿ, 11ಕ್ಕೆ ಅಯೋಧ್ಯೆಯ ನಡೆಯುವ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ನೇರ ಪ್ರಸಾರ ಆಯೋಜಿಸಲಾಗಿದೆ.
Laxmi News 24×7