ಬೆಂಗಳೂರು : ನಿಗಮ ಮಂಡಳಿಗಳ ನೇಮಕ ಪಟ್ಟಿಯಲ್ಲಿ 36 ಶಾಸಕರು, 39 ಕಾರ್ಯಕರ್ತರಿಗೆ ಸ್ಥಾನ ನೀಡಲಾಗಿದೆ’ ಎಂದು ಡಿಸಿಎಂ ಡಿ.ಕೆ. (Dkshivakumar) ಶಿವಕುಮಾರ್ ಅವರು ತಿಳಿಸಿದರು.
ಯಾವುದೇ ಕ್ಷಣದಲ್ಲಿ ನಿಗಮ, ಮಂಡಳಿಗಳ ನೇಮಕ ಪಟ್ಟಿ ಬಿಡುಗಡೆ ಆಗಲಿದೆ. ನಮ್ಮ ನಾಯಕರು ಹಾಗೂ ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದು, ಅವರ ಹಕ್ಕಿನಂತೆ ಈ ಅಧಿಕಾರ ನೀಡಲಾಗುತ್ತಿದೆ ಎಂದರು.
ಲೋಕಸಭೆ ಚುನಾವಣೆ ಸಂಬಂಧ ಕಾಂಗ್ರೆಸ್ (Congress) ಚುನಾವಣಾ ಸಮಿತಿ ಸಭೆಯನ್ನು ನಾಳೆ ಸಂಜೆ 4.30 ಕ್ಕೆ ಕ್ವೀನ್ಸ್ ರಸ್ತೆಯ ಇಂದಿರಾ ಗಾಂಧಿ ಭವನದಲ್ಲಿ ನಡೆಸಲಾಗುವುದು. ಮೊದಲಿಗೆ ಮಧ್ಯಾಹ್ನ ಸಭೆ ಮಾಡಲು ಆಲೋಚನೆ ಮಾಡಿದ್ದೆವು. ಪ್ರಧಾನ ಮಂತ್ರಿಗಳು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಭೆಯನ್ನು ಸಂಜೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ನಾಳೆ ಮೊದಲ ಸುತ್ತಿನ ಚರ್ಚೆ ನಡೆಯಲಿದೆ. ಈ ಸಭೆಗೆ ಜಗದೀಶ್ ಶೆಟ್ಟರ್ (Jagadish shetter) ಹಾಗೂ ಲಕ್ಷ್ಮಣ ಸವದಿ (Lakshman Savadi) ಅವರನ್ನು ಆಹ್ವಾನಿಸಲಾಗಿದ್ದು, ಉಳಿದಂತೆ ಈ ಹಿಂದೆ ಚುನಾವಣಾ ಸಮಿತಿಯಲ್ಲಿದ್ದವರೇ ಇದ್ದಾರೆ. ಸಚಿವರು ಎಲ್ಲಾ ಕ್ಷೇತ್ರಗಳಿಗೆ ಹೋಗಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಈ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ಕೆಲ ಸಚಿವರು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಕೆಶಿ ಪಕ್ಷ ಸೂಚಿಸಿದರೆ ನಾನು ನಿಲ್ಲಬೇಕು, ಅವರೂ ನಿಲ್ಲಬೇಕು ಎಂದು ತಿಳಿಸಿದರು.
ನಾವು 25 ಕ್ಕೂ ಹೆಚ್ಚು ಸೀಟು ಗೆಲ್ಲುವ ವಿಶ್ವಾಸವಿದೆ:
ಜೆಡಿಎಸ್ ಎನ್ಡಿಎ ಜತೆ ಮೈತ್ರಿಗೆ ಮುಂದಾಗಿರುವ ಬಗ್ಗೆ ಕೇಳಿದಾಗ, “ಅದು ಅವರ ಇಚ್ಛೆ. ನಾವು ಕೂಡ ಹಿಂದೆ ಅವರ ಜತೆಗೂಡಿದಾಗ ಹೆಚ್ಚಿನ ಕ್ಷೇತ್ರ ಗೆಲ್ಲುವ ನಿರೀಕ್ಷೆ ಹೊಂದಿದ್ದೆವು. ಆದರೆ ಅಂತಿಮವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಒಂದೊಂದು ಕ್ಷೇತ್ರ ಮಾತ್ರ ಗೆಲ್ಲಲು ಸಾಧ್ಯವಾಯಿತು. ಈ ಬಾರಿ ಏನಾಗುತ್ತದೆ ಎಂದು ಕಾದು ನೋಡೋಣ. ನಾವು 25 ಕ್ಕೂ ಹೆಚ್ಚು ಸೀಟು ಗೆಲ್ಲುವ ವಿಶ್ವಾಸವಿದೆ” ಎಂದು ತಿಳಿಸಿದರು.