ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರ ಜನವರಿ 22 ರಂದು ಉದ್ಘಾಟನೆಗೊಳ್ಳಲಿದೆ. ಈ ಸಮಾರಂಭದ ಬಳಿಕ ತಾವು ಕುಟುಂಬ ಸಮೇತರಾಗಿ ರಾಮಮಂದಿರಕ್ಕೆ ಭೇಟಿ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ತಿಳಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ನಾನು ನನ್ನ ಹೆಂಡತಿ, ಮಕ್ಕಳು ಮತ್ತು ಪೋಷಕರೊಂದಿಗೆ ರಾಮಮಂದಿರಕ್ಕೆ ಹೋಗಲು ಬಯಸುತ್ತೇನೆ.
ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ನಾವು ಹೋಗುತ್ತೇವೆ ಎಂದು ಹೇಳಿದರು.
ಆಹ್ವಾನದ ಬಗ್ಗೆ ಕೇಳಿದಾಗ, ನನಗೆ ಸರ್ಕಾರದಿಂದ ಪತ್ರ ಬಂದಿದೆ. ನಾವು ಅವರಿಗೆ ಕರೆ ಮಾಡಿದಾಗ, ವೈಯಕ್ತಿಕ ಆಹ್ವಾನ ನೀಡಲು ತಂಡ ಬರಲಿದೆ ಎಂದು ನಮಗೆ ತಿಳಿಸಿದರು. ಆ ತಂಡ ಇನ್ನೂ ಬಂದಿಲ್ಲ. ಆಮಂತ್ರಣ ಪತ್ರಿಕೆಯ ಪ್ರಕಾರ ಒಬ್ಬರಿಗೆ ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು, ಇಷ್ಟೊಂದು ವಿವಿಐಪಿಗಳು ಇರುವುದರಿಂದ ಅವರ ಮೇಲೆ ಹೆಚ್ಚಿನ ಭದ್ರತೆಯನ್ನು ಕೇಂದ್ರೀಕರಿಸಲಾಗುವುದು ಎಂದು ಅವರು ಹೇಳಿದರು.
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ನಂತರ, ಜನರು ಅಲ್ಲಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಅಯೋಧ್ಯೆಗೆ ಹೆಚ್ಚಿನ ಯಾತ್ರಿ ರೈಲುಗಳನ್ನು ವ್ಯವಸ್ಥೆ ಮಾಡಲು ನಾವು ಪ್ರಯತ್ನಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದರು.