ಬೆಂಗಳೂರು: ರಾಜ್ಯದಲ್ಲಿ ಜನವರಿ 23ರಂದು ಪಿಎಸ್‌ಐ ಹುದ್ದೆಗಳ ನೇಮಕಾತಿ ಮರುಪರೀಕ್ಷೆ ನಡೆಯಲಿದೆ. ಒಟ್ಟು 545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಮರುಪರೀಕ್ಷೆ ನಡೆಯುತ್ತಿದ್ದು, ಇದೀಗ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದೆ.
ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಪ್ರವೇಶ ಪತ್ರವನ್ನು ಪಡೆಯಲು ಅಭ್ಯರ್ಥಿಗಳು https://kea.kar.nic.inಗೆ ಭೇಟಿ ನೀಡಿ ಸೂಚಿಸಿದ ಮಾಹಿತಿಯನ್ನು ಭರ್ತಿ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆಯನ್ನು ಬಿಡುಗಡೆ ಮಾಡಲಾಗಿದ್ದು, ಮಾಂಗಲ್ಯ ಸರ ಹಾಗೂ ಕಾಲುಂಗುರಕ್ಕೆ ಅನುಮತಿ ನೀಡಲಾಗಿದೆ.
ಮಹಿಳಾ ಅಭ್ಯರ್ಥಿಗಳು ಕಸೂತಿ, ಹೂಗಳು, ಬಟನ್‌ಗಳು ಹೊಂದಿರುವ ಬಟ್ಟೆಗಳನ್ನು, ಜೀನ್ಸ್ ಪ್ಯಾಂಟ್, ಪೂರ್ತಿ ತೋಳಿನ ಬಟ್ಟೆಗಳನ್ನು ಧರಿಸಬಾರದು. ಬದಲಾಗಿ ಮುಜುಗರವಾಗದಂತೆ ಅರ್ಧ ತೋಳಿನ ಬಟ್ಟೆಯನ್ನು ಧರಿಸಬೇಕು. ಎತ್ತರವಾದ ಹಿಮ್ಮಡಿ ಶೂಗಳನ್ನು, ಚಪ್ಪಲಿಗಳನ್ನು, ದಪ್ಪ ಅಡಿಭಾಗ ಹೊಂದಿದ ಶೂಗಳನ್ನು ಧರಿಸಬಾರದು. ತೆಳುವಾದ ಚಪ್ಪಲಿಗಳನ್ನು ಧರಿಸುವುದು ಕಡ್ಡಾಯವಾಗಿದೆ. ಅಲ್ಲದೇ ಮಂಗಳಸೂತ್ರ, ಕಾಲುಂಗುರ ಹೊರತು ಪಡಿಸಿ ಯಾವುದೇ ಲೋಹದ ಆಭರಣಗಳನ್ನು ಧರಿಸಬಾರದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪುರುಷ ಅಭ್ಯರ್ಥಿಗಳು ಪೂರ್ತಿ ತೋಳಿನ ಅಂಗಿ ಧರಿಸುವಂತಿಲ್ಲ. ಬದಲಾಗಿ ಅರ್ಧ ತೋಳಿನ ಅಂಗಿ ಧರಿಸಬೇಕು. ಜೇಬುಗಳಿಲ್ಲದ ಅಥವಾ ಕಮ್ಮಿ ಜೇಬುಗಳಿರುವ ಸರಳ ಪ್ಯಾಂಟ್‌ನ್ನು ಮಾತ್ರ ಧರಿಸಿ ಪರೀಕ್ಷಾ ಕೊಠಡಿಗೆ ಬರಬೇಕು. ಶೂಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ತೆಳುವಾದ ಸ್ಯಾಂಡಲ್, ಚಪ್ಪಲಿಗಳನ್ನು ಮಾತ್ರ ಧರಿಸಬೇಕು. ಕುತ್ತಿಗೆಗೆ ಯಾವುದೇ ರೀತಿಯ ಲೋಹದ ಆಭರಣಗಳು, ಕಿವಿಯೋಲೆ, ಉಂಗುರಗಳು ಮತ್ತು ಕಡಗಗಳನ್ನು ಧರಿಸುವಂತಿಲ್ಲ.
ಡ್ರೆಸ್ ಕೋಡ್ ಅನ್ನು ಅನುಸರಿಸುವುದರ ಜೊತೆಗೆ, ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್‌ಗಳು, ಪೆನ್‌ಡ್ರೈವ್‌ಗಳು, ಇಯರ್ ಫೋನ್‌ಗಳು, ಮೈಕ್ರೋಫೋನ್‌ಗಳು, ಬ್ಲೂ ಟೂಥ್ ಸಾಧನಗಳು ಮತ್ತು ಕೈ ಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ಅನುಮತಿಸಲಾಗುವುದಿಲ್ಲ. ತಿನ್ನುವ ಪದಾರ್ಥಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ನಿಷೇಧಿಸಲಾಗಿದೆ.