ಬೆಂಗಳೂರು: ಇದೇ ತಿಂಗಳು 25 ರಿಂದ ಶಿವರಾಮ ಕಾರಂತ ಬಡಾವಣೆ ನಿವೇಶನಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಲಾಗುವುದು. ಮೊದಲ ಆದ್ಯತೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದರು.
ಬಿಡಿಎ ಪ್ರಧಾನ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ, ಶಿವರಾಮ ಕಾರಂತ ಬಡಾವಣೆ ಹಾಗೂ ನಾಡಪ್ರಭು ಕೆಂಪೇಗೌಡ ಬಡಾವಣೆ ಕಾಮಗಾರಿಗಳ ಪರಿಶೀಲನೆ ಮಾಡಿದ್ದೇವೆ.
ಶಿವರಾಮ್ ಕಾರಂತ ಬಡಾವಣೆ ನಿವೇಶನಕ್ಕೆ ಆನ್ ಲೈನ್ ಮೂಲಕ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗುವುದು. ಉಳಿದಂತೆ ಬೆಂಗಳೂರಿನ ವಿವಿಧ ಬಿಡಿಎ ಕಚೇರಿಗಳಲ್ಲಿ ಆಫ್ ಲೈನ್ ಮೂಲಕ ಅರ್ಜಿಗಳ ಸ್ವೀಕಾರ ಮಾಡಲಾಗುವುದು. ಅರ್ಜಿ ಹಾಕಿದ ನಂತರ ಅರ್ಜಿದಾರರು ಒಂದು ತಿಂಗಳಲ್ಲಿ ನಿವೇಶನ ಒಟ್ಟು ಮೊತ್ತದ 12.5 % ರಷ್ಟು ಆರಂಭಿಕ ಠೇವಣಿ ಕಟ್ಟಬೇಕು. ಪರಿಶಿಷ್ಟರು 5 % ರಷ್ಟು ಠೇವಣಿ ಕಟ್ಟಬೇಕು. ಬಹಳ ಪಾರದರ್ಶಕವಾಗಿ ನಿವೇಶನ ಹಂಚಿಕೆ ಮಾಡಲಾಗುವುದು. ಯಾರು ಬೇಕಾದರೂ ಮಾಹಿತಿ ಪಡೆಯಲು ಹಾಗೂ ನಿವೇಶನ ನೋಡಲು ಅವಕಾಶ ಕಲ್ಪಿಸಲಾಗುವುದು. ಯಾವುದೇ ಅಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.