ಶಿವಮೊಗ್ಗ: ಯಾವ ಧರ್ಮದಲ್ಲಿ ಹಸಿದವರಿಗೆ ಅನ್ನ ಕೊಡುವುದಿಲ್ಲವೋ ಅಂತಹ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ ಎಂದು ವಿವೇಕಾನಂದರು ಘೋಷಿಸಿದ್ದರು. ಇವರ ಜನ್ಮ ದಿನದಂದೇ ನನ್ನ ಯುವಕ ಯುವತಿಯರು ಭ್ರಮನಿರಸನರಾಗದಂತೆ ಅವರ ಭವಿಷ್ಯಕ್ಕೆ ಶಕ್ತಿ ತುಂಬುವ ಸಲುವಾಗಿ ಯುವನಿಧಿ ಜಾರಿ (Yuva Nidhi Scheme) ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ನುಡಿದರು.
ಶಿವಮೊಗ್ಗದಲ್ಲಿ ಲಕ್ಷಾಂತರ ಯುವಸಮೂಹದ ಸಮ್ಮುಖದಲ್ಲಿ ರಾಜ್ಯ ಸರ್ಕಾರದ ಐತಿಹಾಸಿಕ ಗ್ಯಾರಂಟಿ ‘ಯುವನಿಧಿ’ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸುರ್ಜೇವಾಲ ಅವರು ಚುನಾವಣಾ ಪೂರ್ಣ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನಿರುದ್ಯೋಗ ಸಮಸ್ಯೆ, ರೈತರ ಸಮಸ್ಯೆ ಹೆಚ್ಚಾಗಿ, ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ ಏರಿರುವ ಸಂದರ್ಭದಲ್ಲಿ ಸಮಾಜದ ಎಲ್ಲಾ ವರ್ಗಗಳ ಸಮಸ್ಯೆಗೆ ಪರಿಹಾರವಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆವು. ಪ್ರಣಾಳಿಕೆಯಲ್ಲಿ ಘೋಷಿಸಿದೆವು. ಘೋಷಿಸಿದಂತೆ ಜಾರಿ ಮಾಡಿದ್ದೇವೆ ಎಂದರು.