ದೇವನಹಳ್ಳಿ, : ಕರ್ನಾಟಕದಲ್ಲಿ ಮೂರು ಡಿಸಿಎಂ (DCM) ಹುದ್ದೆ ಸೃಷ್ಟಿ ಮಾಡುವ ಯಾವುದೇ ಪ್ರಸ್ತಾಪವಿಲ್ಲ ಎಂದು ನಿನ್ನೆಯಷ್ಟೇ ರಾಜ್ಯ ಕಾಂಗ್ರೆಸ್ ಉಸ್ತುವಾರಿರಣದೀಪ್ ಸಿಂಗ್ ಸುರ್ಜೆವಾಲ(Randeep Singh Surjewala) ಹೇಳಿದ್ದರು. ಆ ಮೂಲಕ ಹೆಚ್ಚುವರಿ ಡಿಸಿಎಂ ಆಯ್ಕೆಗೆ ಫುಲ್ಸ್ಟಾಪ್ ಇಟ್ಟಿದ್ದರು. ಆದರೆ, ಇಂದು ಹೈಕಮಾಂಡ್ ಭೇಟಿಗೂ ಮುನ್ನ ಸಚಿವ ಕೆಎನ್ ರಾಜಣ್ಣ (KN Rajanna) ಅವರು ಹೆಚ್ಚುವರಿ ಡಿಸಿಎಂ ಆಯ್ಕೆ ಬಗ್ಗೆ ಮತ್ತೆ ಮಾತೆತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಲೋಕಸಭಾ ಚುನಾವಣೆಗೂ ಮುನ್ನ ಹೆಚ್ಚುವರಿ ಡಿಸಿಎಂ ಮಾಡಿದರೆ ಒಳ್ಳೆಯದಾಗುತ್ತದೆ. ಈ ಬಗ್ಗೆ ಈಗಾಗಲೇ ಹೈಕಮಾಂಡ್ಗೆ ಸಲಹೆ ನೀಡಿದ್ದೇವೆ. ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತೋ ಅದಕ್ಕೆ ಬದ್ಧರಿರುವುದಾಗಿ ಹೇಳಿದರು.
ದೆಹಲಿಗೆ ಹೋಗುತ್ತಿರುವ ವಿಚಾರವಾಗಿ ಮಾತನಾಡಿದ ರಾಜಣ್ಣ, ವರಿಷ್ಠರು 28 ಕ್ಷೇತ್ರಗಳ ಉಸ್ತುವಾರಿ ಸಚಿವರ ಸಭೆ ಕರೆದಿದ್ದಾರೆ. 28 ಕ್ಷೇತ್ರಗಳ ಉಸ್ತುವಾರಿ ಸಚಿವರು ಸಭೆಯಲ್ಲಿ ಭಾಗವಹಿಸುತ್ತಾರೆ ಎಂದರು.
ರಾಮಮಂದಿರ ಉದ್ಘಾಟನೆಗೆ ಕಾಂಗ್ರೇಸ್ ನಾಯಕರು ಹೋಗದಿರಲು ನಿರ್ಧರಿಸಿದ ವಿಚಾರವಾಗಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ನಮ್ಮ ನಾಯಕರು ಈಗಾಗಲೇ ಕಾರಣ ತಿಳಿಸಿದ್ದಾರೆ ಎಂದರು.
Laxmi News 24×7