ಬೆಂಗಳೂರು): ಲೋಕಸಭೆ ಚುನಾವಣೆ (Loksabha Elections 2024) ವೇಳೆಯೇ ಕಾಂಗ್ರೆಸ್(Congress) ನಲ್ಲಿ ಮೂರು ಡಿಸಿಎಂ (ಉಪಮುಖ್ಯಮಂತ್ರಿ) ಹುದ್ದೆ ಕೂಗು ಭಾರೀ ಜೋರಾಗಿದೆ. ಕಾಂಗ್ರೆಸ್ನ ಕೆಲ ಹಿರಿಯ ನಾಯಕರೇ 3 ಡಿಸಿಎಂ ಸ್ಥಾನ ಸೃಷ್ಟಿ ಬಗ್ಗೆ ಬಹಿರಂಗವಾಗಿಯೇ ಹೇಳಿಕೆ ನೀಡಿದ ಬೆನ್ನಲ್ಲೇ ಪಕ್ಷದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಮಧ್ಯೆ ಪ್ರವೇಶಿಸಿ ಮೂರು ಡಿಸಿಎಂ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುರ್ಜೆವಾಲ, ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಸಿನಿಮೀಯ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡುವ ಯಾವುದೇ ಪ್ರಸ್ತಾಪವಿಲ್ಲ. ಜನರ ಬಳಿ ಆಡಳಿತವನ್ನು ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ. ಮುಂದಿನ ಲೋಕಸಭಾ ಚುನಾವಣೆಗೆ ನಾವು ತಯಾರಿ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಹೆಚ್ಚುವರಿ ಡಿಸಿಎಂ ಕೂಗಿಗೆ ಫುಲ್ ಸ್ಟಾಪ್ ಇಟ್ಟರು. ಅಲ್ಲದೇ ಹೆಚ್ಚುವರಿ ಡಿಸಿಎಂ ಸೃಷ್ಟಿ ಮಾಡಬೇಕೆಂಬುವರಿಗೆ ಟಾಂಗ್ ಕೊಟ್ಟಿದ್ದಾರೆ.