ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಚಟುವಟಿಕೆ ಗರಿಗೆದರಿದೆ. ಪಕ್ಷದಲ್ಲಿನ ವಿಭಜನೆಯ ನಂತರ ಪರಸ್ಪರ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಶಿವಸೇನೆ ಬಣಗಳು ಸಲ್ಲಿಸಿದ್ದ ಅರ್ಜಿಗಳ ಬಗ್ಗೆ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ (Rahul Narvekar) ಇಂದು (ಜನವರಿ 10) ನಿರ್ಣಾಯಕ ತೀರ್ಪು ಪ್ರಕಟಿಸಲಿದ್ದಾರೆ.
ಈ ನಿರ್ಧಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಸರ್ಕಾರ ಮತ್ತು ಪ್ರತಿಸ್ಪರ್ಧಿ ಗುಂಪುಗಳ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ (Maharashtra Politics).
2022ರ ಜೂನ್‌ನಲ್ಲಿ ಹಿಂದಿನ ಉದ್ಧವ್ ಠಾಕ್ರೆ ಸರ್ಕಾರವನ್ನು ತೊರೆದು ಸಮ್ಮಿಶ್ರ ಸರ್ಕಾರ ರಚಿಸಲು ಬಿಜೆಪಿಯೊಂದಿಗೆ ಕೈಜೋಡಿಸಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಬೆಂಬಲಿಗರಾದ 36 ಶಾಸಕರನ್ನು ಅನರ್ಹಗೊಳಿಸುವ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಯ ಬಗ್ಗೆ ಈ ತೀರ್ಪು ಹೊರ ಬರಲಿದೆ. ಈ ಮಧ್ಯೆ ರಾಹುಲ್ ನಾರ್ವೇಕರ್ ಅವರು ರಾಜಕೀಯ ಪಕ್ಷಪಾತ ಮಾಡಿದ್ದಾರೆ ಎಂದು ಆರೋಪಿಸಿ ಉದ್ಧವ್ ಠಾಕ್ರೆ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸುವುದರೊಂದಿಗೆ ರಾಜಕೀಯ ನಾಟಕಕ್ಕೆ ಮಹತ್ವದ ತಿರುವು ನೀಡುವ ಸೂಚನೆ ನೀಡಿದ್ದಾರೆ.