ಕಲಬುರಗಿ, ಜನವರಿ 09: ದಲಿತ ಮತಗಳನ್ನು ಭದ್ರಪಡಿಸಿಕೊಳ್ಳಲು ಲೋಕಸಭಾ ಚುನಾವಣೆಗೂ (Lok Sabha Election) ಮುನ್ನ ಇನ್ನೂ ಮೂರುಡಿಸಿಎಂ(DCM) ಸ್ಥಾನ ಸೃಷ್ಟಿಸುವಂತೆ ಕಾಂಗ್ರೆಸ್ (Congress) ಹೈಕಮಾಂಡ್ ಮೇಲೆ ಸಿದ್ದರಾಮಯ್ಯ (Siddaramaiah) ಆಪ್ತ ಬಣ ಒತ್ತಡ ಹೇರುತ್ತಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ (Mallikarjun Kharge) ಮಾತನಾಡಿ, ಮೂವರು ಡಿಸಿಎಂ ವಿಚಾರ ಹೈಕಮಾಂಡ್ ಮುಂದೆ ಇಲ್ಲ. ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನೇ ಕೇಳಿ ಎಂದಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹೆಚ್ಚುವರಿ ಡಿಸಿಎಂ ವಿಚಾರವಾಗಿ ನಮ್ಮ ಮುಂದೆ ಪ್ರಸ್ತಾವನೆ ಇಲ್ಲ. ಹೆಚ್ಚುವರಿ ಡಿಸಿಎಂ ಉಹಾಪೋಹ. ಎಲೆಕ್ಷನ್ ಸಂದರ್ಭದಲ್ಲಿ ಇಂತಹ ವಿಚಾರ ಚರ್ಚೆಗೆ ಬರಬಾರದು. ಸದ್ಯಕ್ಕೆ ಸರ್ಕಾರ ನಡೆಸುವ ಕಡೆ, ಸಮಸ್ಯೆ ಕಡೆ ಗಮನ ಕೊಡಬೇಕು. ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ಕಡೆಗೆ ಗಮನ ಕೊಡಬೇಕು. ನಮ್ಮ ಗುರಿ ಮುಟ್ಟುವವರೆಗೆ ಇಂತಹದ್ದಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದರು.
ಲೋಕಸಭೆ ಚುನಾವಣೆಗೆ ಕರ್ನಾಟಕದ ಅಭ್ಯರ್ಥಿಗಳ ಆಯ್ಕೆಗೆ ವಿಚಾರವಾಗಿ ನಾಳೆ (ಜ.10) ರಂದು ಸಭೆ ನಡೆಯಲಿದೆ. ಯಾರನ್ನು ಕಣಕ್ಕಿಳಿಸಬೇಕು ಎಂದು ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಇಂಡಿಯಾ ಒಕ್ಕೂಟ ಒಟ್ಟಾಗಿ ಹೋಗುವ ನಿರ್ಣಯ ಕೈಗೊಂಡಿದ್ದೇವೆ. ಬುಧವಾರ ದೆಹಲಿಯಲ್ಲಿ ಅನೇಕ ಘಟಕಗಳ ಸಭೆ ಕೂಡ ಕರೆದಿದ್ದೇವೆ. ಈಗಾಗಲೇ ಎಲ್ಲಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಿದ್ದೇವೆ ಎಂದು ತಿಳಿಸಿದರು.