ವಿಜಯಪುರ, ಜನವರಿ 08: ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ(Corporation Mayor, Deputy Mayor Elections)ಮಹೂರ್ತ ಕೂಡಿ ಬಂದಿದೆ. ನಾಳೆ ಪಾಲಿಕೆಯ ಮೇಯರ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಯುವುದು ಫಿಕ್ಸ್ ಆಗಿದೆ. ಪಾಲಿಕೆಗೆ ಚುನಾವಣೆ ನಡೆದು ವರ್ಷದ ಮೇಲೆ ಮೇಯರ್ ಉಪ ಮೇಯರ್ ಚುನಾವಣೆ ನಡೆಯುತ್ತಿರುವುದು ಹರ ಸಾಹಸವೇ ಆಗಿದೆ. ಕೆಲ ವಿಚಾರಗಳು ನ್ಯಾಯಾಲಯದಲ್ಲಿದ್ದ ಕಾರಣ ಚುನಾವಣೆ ನಡೆಸಲು ಆಗಿರಲಿಲ್ಲ. ಇದೀಗ ನಾಳೆ ಮೇಯರ್ ಉಪ ಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್- ಬಿಜೆಪಿ ಮಧ್ಯೆ ಪಾಲಿಕೆ ಗದ್ದುಗೆಗಾಗಿ ಬಿಗ್ ಫೈಟ್ ನಡೆಯುತ್ತಿದೆ.
ಕಳೆದ 2022ರ ಅಕ್ಟೋಬರ್ 28 ರಂದು 35 ಸದಸ್ಯ ಬಲದ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. ಅಕ್ಟೋಬರ್ 30 ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟವಾಗಿತ್ತು. ಫಲಿತಾಂಶದಲ್ಲಿ 17 ಸ್ಥಾನಗಳನ್ನು ಬಿಜೆಪಿ ಪಡೆದು ಆಧಿಕಾರದ ಸನೀಹ ಬಂದಿತ್ತು. 10 ಸ್ಥಾನಗಲ್ಲಿ ಕಾಂಗ್ರೆಸ್, 5 ಸ್ಥಾನಗಳಲ್ಲಿ ಪಕ್ಷೇತರರು, 2 ಸ್ಥಾನಗಳಲ್ಲಿ ಎಐಎಂಐಎಂ ಹಾಗೂ 1 ಸ್ಥಾನ ಜೆಡಿಎಸ್ ಪಾಲಾಗಿತ್ತು. ಬಳಿಕ
ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಯುತ್ತದೆ ಎನ್ನುವ ವೇಳೆಯಲ್ಲೇ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳ ಮೀಸಲಾತಿ ವಿಚಾರದಲ್ಲಿ ಬಿಜೆಪಿಯ ಕೆಲ ಸದಸ್ಯರು ಮೇಯರ್ ಉಪ ಮೇಯರ್ ಮೀಸಲಾತಿ ವಿಚಾರದಲ್ಲಿ ಕಲಬುರಗಿ ಹೈಕೋರ್ಟ್ಗೆ ದೂರು ಸಲ್ಲಿಸಿದರು.
ಈ ಕಾರಣದಿಂದ ಚುನಾವಣೆ ನಡೆದಿರಲಿಲ್ಲ. ಸದ್ಯ ಹೋಕೋರ್ಟ್ನಲ್ಲಿ ಪ್ರಕರಣ ಇತ್ಯರ್ಥವಾಗಿದ್ದು ನಾಳೆ ಜನವರಿ 9ರಂದು ವಿಜಯಪುರ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಚುನಾವಣೆ ನಡೆಸಲು ಆದೇಶ ಜಾರಿ ಮಾಡಿದ್ದಾರೆ. ನಾಳೆ ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆಣ್ಣವರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ.
ಬೆಳಿಗ್ಗೆ 9 ರಿಂದ 11 ಗಂಟೆಯವರೆಗೆ ನಾಮಪತ್ರಗಳನ್ನು ಸ್ವೀಕರಿಸುವುದು. ಮಧ್ಯಾಹ್ನ 1 ಗಂಟೆಗೆ ಸಭೆ ಆರಂಭ, ಮಧ್ಯಾಹ್ನ 1 ಗಂಟೆಯ ನಂತರ ಮಹಾಪೌರ, ಉಪಮಹಾಪೌರ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ, ಪ್ರಮಾಣ ವಚನ, ಹಾಜರಾತಿ, ಕೋರಂ ಪರಿಶೀಲನೆ, ನಾಮಪತ್ರಗಳ ಪರಿಶೀಲನೆ, ಕ್ರಮಬದ್ಧ ನಾಮಪತ್ರಗಳ ಘೋಷಣೆ, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವುದು, ಉಮೇದುವಾರರ ಪಟ್ಟಿ ಘೋಷಣೆ, ಅವಿರೋಧ ಆಯ್ಕೆಯಾದಲ್ಲಿ ಫಲಿತಾಂಶ ಘೋಷಣೆ, ಚುನಾವಣೆ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಮತದಾನ ಹಾಗೂ ಮತಗಳ ಏಣಿಕೆ ಹಾಗೂ ಫಲಿತಾಂಶ ಘೋಷಣೆ ಪ್ರಕ್ರಿಯೆ ನಡೆಯಲಿದೆ.
ಒಟ್ಟು 35 ಸದಸ್ಯ ಬಲದ ಮಹಾನಗರ ಪಾಲಿಕೆಯ ಗದ್ದುಗೆಗಾಗಿ ಬಿಜೆಪಿ ಕಾಂಗ್ರೆಸ್ ಮಧ್ಯೆ ಹೋರಾಟ ನಡೆದಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ರಾಜಕೀಯ ತಂತ್ರಗಾರಿಕೆಯಿಂದ ಪಾಲಿಕೆ ಕೈ ವಶವಾಗಲಿದೆ. 10 ಸದಸ್ಯರ ಬಲವನ್ನು ಮಾತ್ರ ಹೊಂದಿರುವ ಕಾಂಗ್ರೆಸ್ ಪರವಾಗಿ 5 ಪಕ್ಷೇತರರು, 2 ಎಐಎಂಐಎಂ ಹಾಗೂ 1 ಜೆಡಿಎಸ್ ಸದಸ್ಯ ಬೆಂಬಲವನ್ನು ಎಂ.ಬಿ ಪಾಟೀಲ್ ಪಡೆದಿದ್ದಾರೆ. ಇದರ ಜೊತೆಗೆ ಎಂ ಬಿ ಪಾಟೀಲ್ ಸಹಿತ ನಾಗಠಾಣ ಶಾಸಕ ವಿಠಲ ಕಟಕದೊಂಡ, ಇಬ್ಬರು ಪರಿಷತ್ ಸದಸ್ಯರಾದ ಸುನೀಲಗೌಡ ಪಾಟೀಲ್, ಪ್ರಕಾಸ ರಾಠೋಡ್ ಮತಗಳ ಬಲ ಕೈ ಪಡೆಗಿದೆ. ಹೀಗಾಗಿ ಒಟ್ಟು 22 ಮತಗಳ ಬಲವನ್ನು ಕಾಂಗ್ರೆಸ್ ಪಡೆದುಕೊಂಡಂತಾಗಿದ್ದು ಪಾಲಿಕೆಯ ಗದ್ದುಗೆ
ಕಾಂಗ್ರೆಸ್ ಪಾಲಾಗಲಿದೆ ಎನ್ನಲಾಗುತ್ತಿದೆ.
ಇದಕ್ಕೆಲ್ಲಾ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಕಾರಣವೆಂದು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಹೇಳುತ್ತಿದ್ದಾರೆ. ನಾಳೆ ನಡೆಯಲಿರುವ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳು ನಮ್ಮ ಪಕ್ಷದ ಪಾಲಾಗಲಿವೆ ಎಂದು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ವಾರ್ಡ್ ನಂಬರ್ 34 ರ ಕಾಂಗ್ರೆಸ್ ಸದಸ್ಯೆ
ಮಾಹೇಜಬೀನ್ ಅಬ್ದುಲ್ ರಜಾಕ್ ಹೋರ್ತಿ ಹಾಗೂ ಎಸ್ಟಿ ಪುರುಷ ಮೀಸಲಾತಿ ಇರುವ ಉಪ ಮೇಯರ್ ಸ್ಥಾನಕ್ಕೆ ವಾರ್ಡ್ ನಂಬರ್ 19ರ ಕಾಂಗ್ರೆಸ್ ಸದಸ್ಯ ದಿನೇಶ್ ಹಳ್ಳಿ ಸ್ಪರ್ಧೆ ಮಾಡಲಿದ್ದಾರೆ. ಇವರ ಆಯ್ಕೆ ಬಹುತೇಕ ಖಚಿತವೆಂದ ಹೇಳಲಾಗುತ್ತಿದೆ.